ADVERTISEMENT

ಮೋಡಿ ಮಾಡೀತೇ ನಗ್ಮಾಗ್ಲಾಮರ್‌

ಹೊನಕೆರೆ ನಂಜುಂಡೇಗೌಡ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ಮೀರಠ್: ಮೀರಠ್‌ ದೆಹಲಿಯಿಂದ ನೂರು ಕಿ.ಮೀ. ದೂರವಿರುವ ಪಶ್ಚಿಮ ಉತ್ತರ ಪ್ರದೇಶದ ಪ್ರಮುಖ ಪಟ್ಟಣ. ಇದನ್ನು ‘ಮಿನಿ ಪಾಕಿಸ್ತಾನ’ ಎಂದೂ ಕರೆಯುವು­ದುಂಟು.

ಮುಸ್ಲಿಮರ ಪ್ರಾಬಲ್ಯ­ವಿರುವುದರಿಂದ ಈ ಹೆಸರು ಬಂದಿದೆ. ನ್ಯಾ. ರಾಜೇಂದ್ರ ಸಾಚಾರ್‌ ಸಮಿತಿ ಶಿಫಾರಸು ಪ್ರಕಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾ­ಲಯವು ಮೀರಠ್‌ ಒಳಗೊಂಡು ಅಲ್ಪ­ಸಂಖ್ಯಾತರ ಪ್ರಾಬಲ್ಯವಿರುವ 90 ಜಿಲ್ಲೆ­ಗಳಲ್ಲಿ ಅವರ ಜೀವನ ಮಟ್ಟ ಕುರಿತು ಸಮೀಕ್ಷೆ ನಡೆಸಿದೆ. ‘ಮುಸ್ಲಿಮರ ಶಿಕ್ಷಣ ಮತ್ತು ಸಂಸ್ಕೃತಿ ಉತ್ತೇಜನ ಕೇಂದ್ರ’ದ (ಸಿಇಪಿಇಸಿಎಎಂಐ) ನಿರ್ದೇಶಕ ಅಬ್ದುಲ್ ವಾಹಿದ್‌ ಅವರು ನಡೆಸಿರುವ ಸಮೀಕ್ಷೆ, ಜಿಲ್ಲೆಯಲ್ಲಿ ಮುಸ್ಲಿಮರು ಆರೋಗ್ಯ, ವಸತಿ, ಶಿಕ್ಷಣ, ಉದ್ಯೋಗ ಒಳಗೊಂಡು ಎಲ್ಲ ಕ್ಷೇತ್ರಗಳಲ್ಲೂ ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿ­ದಿದ್ದಾ­ರೆಂದು ಹೇಳಿದೆ.

ಮೇಲ್ನೋಟಕ್ಕೆ ಮೀರಠ್‌ ಹಿಂದುಳಿದಿ­ರುವಂತೆ ಕಾಣುತ್ತಿದೆ. ಬೇಕಾದಷ್ಟು  ಸ್ಕೂಲು–ಕಾಲೇಜುಗಳಿದ್ದರೂ  ಎಲ್ಲ ಮಕ್ಕ­ಳಿಗೂ ಓದುವ ಯೋಗವಿಲ್ಲ. ಮ್ಯಾನೇಜ್‌ಮೆಂಟ್‌, ವೈದ್ಯಕೀಯ, ಎಂಜಿ­ನಿ­ಯರಿಂಗ್‌, ಕಾನೂನು, ಫಾರ್ಮಸಿ, ಡೀಮ್ಡ್‌ ವಿಶ್ವವಿದ್ಯಾಲ­ಯಗಳು ಕಾಸು ಕೊಡುವ ಹೊರಗಿನ ಶ್ರೀಮಂತ ವಿದ್ಯಾರ್ಥಿ­ಗಳಿಗೆ ಪ್ರವೇಶ ನೀಡು­ತ್ತಿವೆ.  ಲೆಕ್ಕವಿಲ್ಲ­ದಷ್ಟು ಉದ್ಯಮಗಳಿದ್ದರೂ ನಿರು­ದ್ಯೋಗ ಸಮಸ್ಯೆ ಕಾಡುತ್ತಿದೆ. ನೀರು, ವಿದ್ಯುತ್, ರಸ್ತೆಯಂಥ ಮೂಲಸೌಲಭ್ಯ­ಗಳ ಕೊರತೆ­ಯಿಂದ ಮೀರಠ್‌ ಸೊರಗಿದೆ.  ಚುನಾ­ವಣೆ­­ಗಳ ಸಮಯ­ದಲ್ಲಿ ರಾಜಕಾರಣಿಗಳು ಭರವಸೆಗಳ ಹೊಳೆ ಹರಿಸುತ್ತಾರೆ. ಒಮ್ಮೆ ಗೆದ್ದು ಹೋದ ಮೇಲೆ ಜವಾಬ್ದಾರಿ ಮರೆತು­ಬಿಡುತ್ತಾರೆ.

2014ರ ಲೋಕಸಭೆ ಚುನಾವಣೆಗೆ ಮೀರಠ್‌ ಅಣಿಯಾಗಿದೆ. ಈ ಕ್ಷೇತ್ರದಿಂದ ಬಾಲಿವುಡ್‌ನ  ಬೆಡಗಿ ನಗ್ಮಾ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಲೋಕಸಭೆ ಹಾಲಿ ಸದಸ್ಯ ರಾಜೇಂದ್ರ ಅಗರವಾಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಸಮಾಜವಾದಿ ಪಕ್ಷ ಸಚಿವ ಶಾಹಿದ್‌ ಮಂಜೂರ್‌, ಬಹುಜನ ಸಮಾಜ ಪಕ್ಷ  ಹಾಜಿ ಶಾಹಿದ್‌ ಇಕ್ಲಾಕ್‌ ಅವರನ್ನು ಅಖಾಡಕ್ಕಿಳಿಸಿವೆ. ‘ಆಮ್‌ ಆದ್ಮಿ ಪಕ್ಷ’ದ ಅಭ್ಯರ್ಥಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

‘ಕಾಂಗ್ರೆಸ್‌ನ ನಗ್ಮಾ ಹೊರಗಿನವರು. ಅವರು ಗೆದ್ದರೂ ಇಲ್ಲಿಗೆ ಬರುವುದಿಲ್ಲ. ಜನರಿಗೆ ಸಿಗುವುದಿಲ್ಲ’ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ‘ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸು­ವುದಾದರೆ, ನಾನ್ಯಾಕೆ ಮೀರಠ್‌ಗೆ ಬರಬಾರದು’ ಎಂದು ನಗ್ಮಾ ತಿರುಗೇಟು ನೀಡಿದ್ದಾರೆ.

‘ನಗ್ಮಾ ಗ್ಲಾಮರ್‌’ಗೆ ಮನಸೋತಿ­ರುವ ಮೀರಠ್‌ ಮತದಾರರು, ಅದ­ರಲ್ಲೂ ಯುವಕರು ಅವರ ಹಿಂದೆ ಬೀಳುತ್ತಿದ್ದಾರೆ. ಅನೇಕರು ನಟಿ­ಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರಿಕಿರಿ ಮಾಡಿದ್ದೂ ಇದೆ. ನಗ್ಮಾ, ಮತದಾರರ ಹೃದಯಗಳಿಗೆ ಲಗ್ಗೆ ಹಾಕಲು ಪ್ರಯತ್ನಿ­ಸುತ್ತಿದ್ದಾರೆ. ರೋಡ್‌ ಷೋಗಳಲ್ಲಿ ಪಾಲ್ಗೊಳ್ಳುತ್ತಿ­ದ್ದಾರೆ. ಬೀದಿ ಬದಿ ಹೋಟೆಲ್‌­ಗಳಲ್ಲಿ ಚಹಾ ಕುಡಿಯುತ್ತಾ ಮತದಾರರ ಜತೆ ಹರಟುತ್ತಾರೆ. ಅಡುಗೆ ಮನೆಗಳಿಗೂ ನುಗ್ಗಿ ಮಹಿಳೆಯರ ಜತೆ ಆತ್ಮೀಯವಾಗಿ ಮಾತನಾಡುತ್ತಿದ್ದಾರೆ. ನಾನು ಗೆದ್ದರೆ ಮೀರಠ್‌ನಲ್ಲಿ ನೆಲೆಸು­ತ್ತೇನೆಂದು ಆಶ್ವಾಸನೆ ಕೊಡುತ್ತಿದ್ದಾರೆ. ಅವರ ಈ ತಂತ್ರ ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂದು ಹೇಳುವುದು ಕಷ್ಟ.

ಸ್ಥಳೀಯ ಕಾಂಗ್ರೆಸ್‌ ಮುಖಂಡರು ಪೂರ್ಣ ಮನಸಿನಿಂದ ನಗ್ಮಾ ಅವರ ಪರವಾಗಿ ಪ್ರಚಾರ ಮಾಡುತ್ತಿಲ್ಲ. ಪಟ್ಟಣ­ದವರೇ ಆದ ದಯಾನಂದ ಗುಪ್ತ, ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಮೊದಲಿಗೆ ಅವರಿಗೆ ಟಿಕೆಟ್‌ ಸಿಗಬಹು­ದೆಂಬ ನಿರೀಕ್ಷೆ ಇತ್ತು. ಅದು ಹುಸಿ­ಯಾಯಿತು. ಕಾಂಗ್ರೆಸ್‌ ಮುಖಂಡರ ಅಸಮಾಧಾನಕ್ಕಿದು ಕಾರಣವಾಗಿದೆ.

‘ಈ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ವೈಶ್ಯ ಸಮುದಾಯಕ್ಕೆ ಸೇರಿದ ಗುಪ್ತ ಅವರಿಗೆ ಟಿಕೆಟ್‌ ಕೊಟ್ಟಿದ್ದರೆ ಹಿಂದು ಮತಗಳು ವಿಭಜನೆ ಆಗುತ್ತಿದ್ದವು. ಹಾಗಾಗಿದ್ದರೆ ನಮ್ಮ ಪಕ್ಷದ ಅಭ್ಯರ್ಥಿಗೆ ಕಷ್ಟವಾಗುತ್ತಿತ್ತು. ಸದ್ಯ ಆ ಅಪಾಯ ತಪ್ಪಿತು’ ಎಂದು ಬಿಜೆಪಿ ಮುಖಂಡರು ಸಂಭ್ರಮದಿಂದ ಬೀಗುತ್ತಿದ್ದಾರೆ.

ಮೀರಠ್‌ ಆರಂಭದಿಂದಲೂ ಬೇರೆ ಬೇರೆ ಪಕ್ಷಗಳಿಗೆ ಒಲಿದಿದೆ. ಕಾಂಗ್ರೆಸ್‌, ಸಂಯುಕ್ತ ಸಮಾಜವಾದಿ ಪಕ್ಷ, ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದೆ. 1991ರಿಂದ 98 ರವರೆಗೆ ಮೂರು ಸಲ ಬಿಜೆಪಿಯನ್ನು ಬೆಂಬಲಿಸಿದೆ. 99ರಲ್ಲಿ ಕಾಂಗ್ರೆಸ್‌, 2004ರಲ್ಲಿ ಬಿಎಸ್‌ಪಿ ಕೈ ಹಿಡಿದಿದೆ. ಹನ್ನೊಂದು ವರ್ಷದ ಬಳಿಕ ಅಂದರೆ 2009ರಲ್ಲಿ ಬಿಜೆಪಿ ತೆಕ್ಕೆಗೆ ಮರಳಿ ಅಗರವಾಲ್‌ ಅವರನ್ನು ಲೋಕಸಭೆಗೆ ಕಳುಹಿಸಿದೆ.

ಮುಜಫ್ಫರನಗರದ ಗಲಭೆ ಬಳಿಕ ಮೀರಠ್‌ನಲ್ಲೂ ಹಿಂದೂ, ಮುಸ್ಲಿ­ಮರ ಮತಗಳ ಧ್ರುವೀಕರಣ ಆಗುತ್ತಿದೆ. ಆದರೆ, ‘ಮುಸ್ಲಿಮರ ನಂತರದ ಸ್ಥಾನ­ದಲ್ಲಿರುವ ದಲಿತರು ಮೇಲ್ಜಾತಿ ಹಿಂದೂ­ಗಳ ಜತೆಗೂಡಿ ಬಿಜೆಪಿ ಬೆಂಬಲಿಸುವರೇ?’ ಎನ್ನುವ ಪ್ರಶ್ನೆ ಮೇಲೆ ಈ ಕ್ಷೇತ್ರದ ಫಲಿತಾಂಶ ನಿಂತಿದೆ. ಬಿಜೆಪಿ ಬೆಂಬಲಿಗರು ಈ ಸಲ ದಲಿತರು ಖಂಡಿತಾ ರಾಜೇಂದ್ರ ಅಗರವಾಲ್‌ ಪರ ನಿಲ್ಲುತ್ತಾರೆನ್ನುವ ವಿಶ್ವಾಸ ಇಟ್ಟು­ಕೊಂಡಿದ್ದಾರೆ.
‘ಮೀರಠ್‌ನಲ್ಲಿ ನಗ್ಮಾ ಸ್ಪರ್ಧೆಯಲ್ಲೇ ಇಲ್ಲ. ಅವರನ್ನು ಮುಸ್ಲಿಮರು ಬೆಂಬಲಿ­ಸುವುದಿಲ್ಲ.

ಈ ಸಲ ಧರ್ಮದ ಆಧಾರ­ದಲ್ಲಿ ಹಿಂದೂ, ಮುಸ್ಲಿಮರು ಪ್ರತ್ಯೇಕ­ಗೊಂಡಿದ್ದಾರೆ. ನಗ್ಮಾ ನಮ್ಮ ದೃಷ್ಟಿಯಲ್ಲಿ ಮುಸ್ಲಿಮರೇ ಅಲ್ಲ. ಬಿಜೆಪಿಯ ರಾಜೇಂದ್ರ ಅಗರವಾಲ್‌ ಪ್ರಬಲ ಅಭ್ಯರ್ಥಿ. ಅವರಿಗೆ ಸಮಬಲದ ಪೈಪೋಟಿ ನೀಡುವ ಪಕ್ಷವನ್ನು ನಾವು ಬೆಂಬಲಿಸು­ತ್ತೇವೆ’ ಎಂದು ಗ್ಯಾರೇಜ್ ಮಾಲೀಕ ಸಾಜ್ಜದ್‌ ಮಲ್ಲಿಕ್‌ ಹೇಳು­ತ್ತಾರೆ. ಅವರ ವಿಶ್ಲೇಷಣೆಯನ್ನು 28 ವರ್ಷದ ಪರ್ವೀಜ್‌ ಸಮರ್ಥಿ­ಸುತ್ತಾರೆ.

‘ಮೀರಠ್‌ ಚುನಾವಣೆ ಧರ್ಮದ ಆಧಾರದ ಮೇಲೆ ನಡೆಯಲಿದೆ. ಆ ಬಗ್ಗೆ ಅನುಮಾನ ಬೇಡ. ಸಮಾಜವಾದಿ ಪಕ್ಷದ ಮೇಲೆ ಜನರಿಗೆ ಸಿಟ್ಟಿದೆ. ಮುಜಫ್ಫರ­­ನಗರದ ಗಲಭೆ ತಡೆಯಲು ಸರ್ಕಾರ ಏನೂ ಮಾಡಲಿಲ್ಲ. ಮಾಯಾ­ವತಿ ಆಡಳಿತದಲ್ಲಿ ಮತೀಯ ಗಲಭೆಗಳು ನಡೆಯಲಿಲ್ಲ. ಗೂಂಡಾ ಮತ್ತು ಕ್ರಿಮಿ­ನಲ್‌ಗಳ ಹಾವಳಿ ಇರಲಿಲ್ಲ. ಕಾನೂನು– ಸುವ್ಯವಸ್ಥೆ ಹದಗೆಟ್ಟಿರಲಿಲ್ಲ. ಅಖಿಲೇಶ್‌­ಗಿಂತ ಮಾಯಾವತಿ ಸರ್ಕಾರ ಎಲ್ಲ ದೃಷ್ಟಿಯಿಂದ ಚೆನ್ನಾಗಿತ್ತು. ಭ್ರಷ್ಟಾಚಾರ ಆರೋಪಕ್ಕೆ ಸಿಕ್ಕಿಕೊಳ್ಳದಿದ್ದರೆ ಮಾಜಿ ಮುಖ್ಯಮಂತ್ರಿಗೆ ಸರಿಸಾಟಿಯಾದ ನಾಯಕರೇ ಇರುತ್ತಿರಲಿಲ್ಲ’ ಎನ್ನುವುದು ಪ್ಲೈವುಡ್‌ ವ್ಯಾಪಾರಿ ಮುಖೇಶ್‌ ಜೈನ್‌ ಅವರ ಅಭಿಪ್ರಾಯ.

ಕೆಲವು ಮತದಾರರು ಮೋದಿಯವರ ನಾಯಕತ್ವದ ಕುರಿತು ಪ್ರಸ್ತಾಪಿಸುತ್ತಾರೆ. ಅವರು ದಕ್ಷ ನಾಯಕತ್ವ ಕೊಡಬಲ್ಲ­ರೆಂದು ಪ್ರತಿಪಾದಿಸುತ್ತಾರೆ. ‘ಕ್ಷೇತ್ರದಲ್ಲಿ ಮೋದಿ ಬಗೆಗೆ ಒಲವಿರುವುದು ನಿಜ. ಆದರೆ, ಅದನ್ನು ಅಲೆ ಎಂದು ಪರಿಗಣಿಸ­ಲಾಗದು. ಒಲವು ಬೇರೆ, ಅಲೆಯೇ ಬೇರೆ ಎಂಬುದು 29ವರ್ಷದ ಕಮಲ್‌ ಕಪೂರ್‌ ವ್ಯಾಖ್ಯಾನ. ಕಾಲೇಜೊಂದರ ಪತ್ರಿಕೋದ್ಯ­ಮದ ಉಪನ್ಯಾಸಕ ಪ್ರಭಾತ್‌ ಸಿಂಗ್‌ ಎಎಪಿ ಬೆಂಬಲಿಸುತ್ತಾರೆ. ಕೇಜ್ರಿವಾಲ್‌ ಪರಿವರ್ತನೆ ತರಬಲ್ಲರು ಎನ್ನುವುದು ಅವರ ನಂಬಿಕೆ.

ಮೀರಠ್‌ ಉಳಿಸಿಕೊಳ್ಳಲು ಬಿಜೆಪಿ ಶತಾಯಗತಾಯ ಹೋರಾಡುತ್ತಿದ್ದು ಕಿತ್ತುಕೊಳ್ಳಲು ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪೈಪೋಟಿ ನಡೆಸು­ತ್ತಿವೆ. ಎಲ್ಲ ಪಕ್ಷಗಳ ಜೇಬಿಗೆ ಕೈ ತೂರಿಸಲು ಎಎಪಿ ಹೊಂಚು ಹಾಕು­ತ್ತಿದೆ. ಸದ್ಯದ ಸ್ಥಿತಿಯಲ್ಲಿ ಯಾರ ನಡುವೆ ಪೈಪೋಟಿ ನಡೆಯಲಿದೆ ಎಂದು ಊಹಿಸುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.