ADVERTISEMENT

ಕೋಲಾರ ಕ್ಷೇತ್ರ ವ್ಯಾಪ್ತಿ ನೀತಿಸಂಹಿತೆ ಉಲ್ಲಂಘನೆ: 437 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 3 ಮೇ 2019, 11:10 IST
Last Updated 3 ಮೇ 2019, 11:10 IST
   

ಕೋಲಾರ: ‘ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಈವರೆಗೆ 437 ಪ್ರಕರಣ ದಾಖಲಿಸಿಕೊಂಡು, ₹ 21.55 ಲಕ್ಷ ಹಾಗೂ ₹ 37 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಾರ್ಚ್‌ 10ರಿಂದ ಚುನಾವಣಾ ನೀತಿಸಂಹಿತೆ ಜಾರಿಯಾಯಿತು. ಬಳಿಕ ವಿವಿಧೆಡೆ 7 ಪ್ರಕರಣಗಳಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ. 13,095 ಲೀಟರ್ ಮದ್ಯ ಹಾಗೂ 3.69 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 18ರಿಂದ 19 ವರ್ಷದೊಳಗಿನ 29,805 ಮಂದಿ ಯುವ ಮತದಾರರು ಮೊದಲ ಬಾರಿಗೆ ಹಕ್ಕು ಚಲಾಯಿಸಲಿದ್ದಾರೆ. ಶ್ರೀನಿವಾಸಪುರದಲ್ಲಿ 5,732, ಮುಳಬಾಗಿಲು 5,058, ಕೆಜಿಎಫ್ 3,719, ಬಂಗಾರಪೇಟೆ 4,691, ಕೋಲಾರ 5,505, ಮಾಲೂರು 5,111 ಮಂದಿ ಮತದಾರರಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 2,100 ಮತಗಟ್ಟೆಗಳಿದ್ದು, 531 ಅತಿ ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 6 ಸಖಿ ಮತಗಟ್ಟೆ ಹಾಗೂ ತಲಾ 1 ಅಂಗವಿಕಲ ಸಿಬ್ಬಂದಿ ಕಾರ್ಯ ನಿರ್ವಹಿಸುವ ಮತಗಟ್ಟೆ ತೆರೆಯಲಾಗಿದೆ’ ಎಂದು ಹೇಳಿದರು.

‘ಕೋಲಾರ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಾ ಒಂದು ಮತಗಟ್ಟೆಯಲ್ಲಿ ಸಂಪೂರ್ಣ ಅಂಗವಿಕಲ ಸಿಬ್ಬಂದಿಯೇ ಕಾರ್ಯ ನಿರ್ವಹಿಸುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುವ ತಲಾ 2 ಸಖಿ ಬೂತ್ ತೆರೆಯಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಶ್ರೀನಿವಾಸಪುರ ಪಟ್ಟಣದ ರಂಗಾ ರಸ್ತೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 3, ಮುಳಬಾಗಿಲಿನ ಶ್ರೀ ಮಾರುತಿ ಪ್ರೌಢ ಶಾಲೆ ಕೊಠಡಿ ಸಂಖ್ಯೆ 2, ಕೆಜಿಎಫ್‌ನ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಕೊಠಡಿ ಸಂಖ್ಯೆ 1, ಕೋಲಾರ ನಗರದ ಮದರ್‌ ಥೆರೇಸಾ ಪ್ರೌಢ ಶಾಲೆ ಕೊಠಡಿ ಸಂಖ್ಯೆ 1 ಹಾಗೂ ಮಾಲೂರಿನ ಪಿಡಬ್ಲೂಡಿ ಅತಿಥಿಗೃಹ ಕಟ್ಟಡದಲ್ಲಿ ಸಖಿ ಬೂತ್‌ ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2ರಂತೆ 12 ಸಖಿ ಬೂತ್‌ ತೆರೆಯಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.