ADVERTISEMENT

ಕಮಲ ಅರಳಿಸಿದ 1998ರ ಚುನಾವಣೆ

ನೆಲಕಚ್ಚಿದ ಕಾಂಗ್ರೆಸ್; ಒಕ್ಕಲಿಗ ಸಮುದಾಯದ ಮತಗಳ ಕ್ರೋಡೀಕರಣವಾಗುವ ಲೆಕ್ಕಾಚಾರ ತಲೆಕೆಳಗು

ಕೆ.ಎಸ್.ಗಿರೀಶ್
Published 3 ಮೇ 2019, 18:05 IST
Last Updated 3 ಮೇ 2019, 18:05 IST
ವಿಜಯಶಂಕರ್
ವಿಜಯಶಂಕರ್   

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರ 11ನೇ ಲೋಕಸಭಾ ಚುನಾ ವಣೆಯವರೆಗೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಚೊಚ್ಚಲ ಚುನಾವಣೆ (1951)ಯಲ್ಲಿ ಕೆಎಂಪಿಪಿ ಪಕ್ಷದಿಂದ ಎಂ.ಎಸ್.ಗುರುಪಾದ ಸ್ವಾಮಿ ಆಯ್ಕೆಯಾಗಿದ್ದರೂ ಆಗ ದ್ವಿಸದಸ್ಯ ಕ್ಷೇತ್ರವಾಗಿದ್ದುದ್ದರಿಂದ ಕಾಂಗ್ರೆಸ್‌ನ ಎನ್.ರಾಚಯ್ಯ ಸಹ ಆಯ್ಕೆಯಾಗಿದ್ದರು. ಹೀಗಾಗಿ, ಮೊದಲ ಚುನಾವಣೆಯಿಂದ 11ನೇ ಚುನಾವಣೆಯವರೆಗೂ ಸತತವಾಗಿ ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಂದು ರೀತಿಯಲ್ಲಿ ಮೈಸೂರು ಕ್ಷೇತ್ರ ಎಂದರೆ ಅದು ಕಾಂಗ್ರೆಸ್‌ನ ಭದ್ರಕೋಟೆ ಎಂಬಂತಾಗಿತ್ತು.

ಈ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ 1991ರಲ್ಲಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಪಕ್ಷಕ್ಕೆ ಕರೆ ತಂದು ಟಿಕೆಟ್ ನೀಡಿದ್ದರೂ ಗೆಲುವು ಸಾಧಿಸಿರಲಿಲ್ಲ. ನಂತರದ ಚುನಾವಣೆಯಲ್ಲಿ ಜನತಾದಳ ದಿಂದ ಎಚ್.ಡಿ.ದೇವೇಗೌಡ ಸೇರಿದಂತೆ ಆ ಕಾಲದ ವರಿಷ್ಠರು ಬಿರುಸಿನ ಪ್ರಚಾರ ನಡೆಸಿ, ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಯತ್ನಿಸಿದ್ದರೂ ಕೂದಲೆಳೆಯ ಅಂತರದಿಂದ ಗೆಲುವು ಕೈತಪ್ಪಿತ್ತು.

ಆದರೆ, 1996ರ ಚುನಾವಣೆಯ ನಂತರ ಅಲ್ಪಕಾಲದ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ, ಎಚ್‌.ಡಿ.ದೇವೇಗೌಡ ಹಾಗೂ ಐ.ಕೆ.ಗುಜ್ರಾಲ್‌ ನೇತೃತ್ವದ ಸರ್ಕಾರಗಳು ಪತನವಾಗಿದ್ದರಿಂದ 1998ರಲ್ಲಿ ಮತ್ತೆ ಚುನಾವಣೆ ಎದುರಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈಸೂರು ಕ್ಷೇತ್ರವನ್ನು ಕಳೆದುಕೊಂಡಿತು. ಇದೇ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಿತು.

ADVERTISEMENT

ಈ ಚುನಾವಣೆಯಲ್ಲಿ ಅನಾರೋಗ್ಯಪೀಡಿತರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಪರ್ಧಿಸಲು ಹಿಂದೇಟು ಹಾಕಿದರು. ಕಾಲು ನೋವಿನಿಂದ ಪ್ರಚಾರ ನಡೆಸಲು ಸಾಧ್ಯವಾಗದು ಎಂದು ಕೈಚೆಲ್ಲಿದರು. ಇದರಿಂದ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಯ ಕೊರತೆ ಎದುರಾಯಿತು. ಅಲ್ಲದೇ, ಕೇವಲ ಎರಡೇ ವರ್ಷದಲ್ಲಿ ಚುನಾವಣೆ ಎದುರಾಗಿದ್ದರಿಂದ ಬಹುತೇಕ ಮುಖಂಡರು ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ. ಆಗ ಎಚ್.ಡಿ.ಕೋಟೆ ಭಾಗದಲ್ಲಿ ಪ್ರಭಾವಿ ಮುಖಂಡ ಎನಿಸಿದ್ದ ಚಿಕ್ಕಮಾದು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತು. ಇತ್ತ ಬಿಜೆಪಿಯು ಹುಣಸೂರಿನಿಂದ ಶಾಸಕರಾಗಿದ್ದ ಸಿ.ಎಚ್.ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿತು.

ಜನತಾದಳದಿಂದ ಹಿಂದಿನ ಬಾರಿ ಅಲ್ಪಮತಗಳಿಂದ ಸೋತಿದ್ದ ಜಿ.ಟಿ.ದೇವೇಗೌಡ ಅವರು ಗೆಲುವು ಸಾಧಿಸುತ್ತಾರೆ ಎಂದೇ ವಿಶ್ಲೇಷಿಸಲಾಯಿತು. ಒಕ್ಕಲಿಗ ಸಮುದಾಯದ ಮತಗಳ ಕ್ರೋಢೀಕರಣವಾಗುತ್ತದೆ ಎಂಬ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಬೆಂಬಲ ಹಿಂತೆಗೆದುಕೊಂಡು ಚುನಾವಣೆಗೆ ಕಾರಣವಾಯಿತು ಎಂಬ ಆರೋಪಗಳಿಂದ ಕಾಂಗ್ರೆಸ್‌ ಮಂಕಾಗಿತ್ತು. ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ಸಮರ್ಥವಾಗಿ ಸ್ಥಿರ ಸರ್ಕಾರ ನೀಡುವುದಿಲ್ಲ ಎಂಬುದೂ ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ನೇತೃತ್ವದ ಸರ್ಕಾರಗಳ ಪತನವು ಋಜುವಾತುಪಡಿಸಿತ್ತು. ಈ ವಿಷಯಗಳನ್ನಿಟ್ಟುಕೊಂಡು ಅಟಲ್ ಬಿಹಾರಿ ವಾಜಪೇಯಿ ತಮ್ಮ ಅಮೋಘ ವಾಗ್ಘರಿಯ ಮೂಲಕ ಮಾಡಿದ ಭಾಷಣಗಳು ದೇಶದಲ್ಲಿ ಕಮಲದ ಪರ ಹೆಚ್ಚು ಅಲೆಯನ್ನು ಎಬ್ಬಿಸಿತ್ತು.

ಇದರ ಲಾಭ ಪಡೆದ ವಿಜಯಶಂಕರ್‌ ಸ್ಥಿರ ಸರ್ಕಾರದ ಭರವಸೆಯನ್ನೇ ಪ್ರಧಾನವಾಗಿ ಬಿಂಬಿಸಿ, ಮತ್ತೆ ಮತ್ತೆ ಚುನಾವಣೆಯಾಗುವುದನ್ನು ತಪ್ಪಿಸಬೇಕಾದರೆ ಬಿಜೆಪಿಗೆ ಮತಹಾಕಿ ಎಂದು ಹೆಚ್ಚು ಪ್ರಚಾರ ಮಾಡಿದರು. ಇದರಿಂದ ಮತದಾರರ ಒಲವು ಕ್ರಮೇಣ ಬಿಜೆಪಿಯತ್ತ ವಾಲತೊಡಗಿತು.

ವಿಜಯಶಂಕರ್ 1,03,024 ಮತಗಳಷ್ಟು ಭಾರಿ ಅಂತರದಿಂದ ಜಯ ಸಾಧಿಸಿದರು. ಕಾಂಗ್ರೆಸ್‌ನ ಚಿಕ್ಕಮಾದು 2,52,822 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಗೆಲುವು ಶತಸಿದ್ಧ ಎಂದು ನಂಬಲಾಗಿದ್ದ ಜನತಾದಳದ ಅಭ್ಯರ್ಥಿ ಜಿ.ಟಿ.ದೇವೇಗೌಡ 2,23,385 ಮತಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ಕುಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.