ADVERTISEMENT

ಚುನಾವಣಾ ಆಯೋಗದಿಂದ ಇಬ್ಬಗೆ ನೀತಿ: ಎಚ್‌ಡಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:23 IST
Last Updated 26 ಮಾರ್ಚ್ 2019, 19:23 IST
   

ರಾಮನಗರ: ‘ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯ ಅಡಿ ರೈತರ ಖಾತೆಗಳಿಗೆ ಹಣ ಹಾಕಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿರುವಂತೆ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಗೂ ಅನುಮತಿ ನೀಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಕೆಯ ಅಂಗವಾಗಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕೃಷಿ ಸಮ್ಮಾನ್‌ ಯೋಜನೆಯ ಅಡಿ ರೈತರ ಖಾತೆಗೆ ₹ 2 ಸಾವಿರ ಹಾಕಲು ಆಯೋಗ ಅನುಮತಿ ನೀಡಿದೆ. ಆದರೆ ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಚಾಲ್ತಿಯಲ್ಲಿ ಇರುವ ಸಾಲ ಮನ್ನಾ ಯೋಜನೆಗೆ ಕೊಕ್ಕೆ ಹಾಕಿದೆ. ಯೋಜನೆಯ ಅಡಿ ಎರಡನೇ ಕಂತಿನಲ್ಲಿ ₹ 11 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಆದರೆ ಇದನ್ನು ರೈತರ ಖಾತೆಗೆ ಹಾಕದಂತೆ ಚುನಾವಣಾ ಆಯುಕ್ತರು ಸೂಚನೆ ನೀಡಿದ್ದಾರೆ. ಆಯೋಗದ ಈ ಇಬ್ಬಗೆಯ ನೀತಿಯನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ’ ಎಂದರು.

31ರಂದು ಸಮಾವೇಶ

ADVERTISEMENT

ಇದೇ 31ರಂದು ಬೆಂಗಳೂರಿನ ಮಾದನಾಯಕನಹಳ್ಳಿ ನೈಸ್ ರಸ್ತೆ ಜಂಕ್ಷನ್‌ ಬಳಿ ಕಾಂಗ್ರೆಸ್‌–ಜೆಡಿಎಸ್ ಜಂಟಿಯಾಗಿ ಬೃಹತ್‌ ಸಮಾವೇಶ ಆಯೋಜಿಸಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪಾಲ್ಗೊಳ್ಳಲಿದ್ದಾರೆ. ಈ ಸಭೆಯು ದೇಶದ ರಾಜಕಾರಣಕ್ಕೆ ಸಂದೇಶವೊಂದನ್ನು ರವಾನಿಸಲಿದೆ’ ಎಂದರು.

ಬೆಂಗಳೂರಿಗರಿಗೆ ಮೋದಿ ಮೋಹ

ರಾಜ್ಯ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಗಾಗಿ ₹ 1 ಲಕ್ಷ ಕೋಟಿ ವ್ಯಯಿಸುತ್ತಿದೆ. ಇಷ್ಟಾದರೂ ನಗರದ ಮಂದಿ ಮೋದಿ ಮೋಹ–ಮಮಕಾರ ಬಿಡುತ್ತಿಲ್ಲ’ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪೈಕಿ ಬೆಂಗಳೂರು ನಗರ ವ್ಯಾಪ್ತಿಯ ಆರ್‌.ಆರ್. ನಗರ, ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ 15 ಲಕ್ಷ ಮತದಾರರು ಇದ್ದಾರೆ. ಉಳಿದ 5 ಗ್ರಾಮೀಣ ಕ್ಷೇತ್ರಗಳಲ್ಲಿ 9 ಲಕ್ಷ ಮತದಾರರು ಇದ್ದಾರೆ. ಮೋದಿ ಶಕ್ತಿ ನಾಶ ಮಾಡಲು ಗ್ರಾಮೀಣರು ಪಣ ತೊಡಬೇಕು’ ಎಂದು ಮನವಿ ಮಾಡಿದರು.

ತಾವು ಮತ್ತು ಡಿ.ಕೆ. ಶಿವಕುಮಾರ್ ನಿಜವಾದ ಜೋಡೆತ್ತು ಎಂದು ಪುನರುಚ್ಚರಿಸಿದ ಅವರು ‘ಬೆಳೆ ತಿನ್ನಲು ಬರುವ ಕಳ್ಳ ಎತ್ತುಗಳನ್ನು ನಂಬಬೇಡಿ, ದುಡಿಯುವ ಎತ್ತುಗಳನ್ನು ಬಳಸಿಕೊಳ್ಳಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.