ಚಂದ್ರಬಾಬು ನಾಯ್ಡು
ಕರ್ನೂಲ್: ಆಡಳಿತ ವಿರೋಧಿ ಅಲೆ ಮತ್ತು ಎಲ್ಲ ಆಯಾಮಗಳಲ್ಲೂ ಸರ್ಕಾರದ ವೈಫಲ್ಯದ ಪರಿಣಾಮ ಆಂಧ್ರಪ್ರದೇಶದಲ್ಲಿ ಟಿಡಿಪಿ ಮೈತ್ರಿಕೂಟ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಲಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.
ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ತನ್ನ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು, ಆದರೆ ಅಧಿಕಾರ ಸಿಕ್ಕ ಮೇಲೆ ಎಲ್ಲವನ್ನೂ ಮರೆತರು ಎಂದು ಚಂದ್ರಬಾಬು ನಾಯ್ಡು ಆರೋಪಿಸಿದರು.
ವೈಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಹಗೆತನ ಸಾಧಿಸುತ್ತಿದೆ ಎಂದ ಅವರು ರಾಜ್ಯದ ಜನತೆ ಸಕಾಲಕ್ಕೆ ಸರಿಯಾಗಿ ವೇತನ ಮತ್ತು ಪಿಂಚಣಿ ಪಡೆಯದ ಮಟ್ಟಿಗೆ ಸರ್ಕಾರ ಆರ್ಥಿಕ ಸಾಲಕ್ಕೆ ಸಿಲುಕಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯ ವಿಭಜನೆಯಾಗಿ 10 ವರ್ಷಗಳ ನಂತರವೂ ಸರಿಯಾದ ರಾಜಧಾನಿ ನಿರ್ಮಿಸಲು ವೈಎಸ್ಆರ್ ಕಾಂಗ್ರೆಸ್ ಕಡೆಯಿಂದ ಸಾಧ್ಯವಾಗಿಲ್ಲ ಎಂದರು. ರಾಜ್ಯದಲ್ಲಿ ಪ್ರಗತಿ ಕುಂಟಿತವಾಗಿದ್ದು, ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುವ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ರಾಜ್ಯ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪ ಮಾಡಿದರು.
ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲ, ವಿದ್ಯುತ್ ಇಲ್ಲ, ಸರಿಯಾದ ರಸ್ತೆಗಳಿಲ್ಲ ಹಾಗೂ ಜನರ ಆದಾಯ ಕಡಿಮೆಯಾಗಿದ್ದು ವೆಚ್ಚ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರ ಒಟ್ಟಾರೆ ಜೀವನ ಮಟ್ಟ ಕುಸಿಯುತ್ತಿದೆ. ಇದು ತುಂಬಾ ಅಪಾಯಕಾರಿ ಎಂದು ನಾಯ್ಡು ಹೇಳಿದರು.
ಆಂಧ್ರದಲ್ಲಿ ಮೇ 13ರಂದು ಏಕಕಾಲದಲ್ಲಿ 25 ಲೋಕಸಭಾ ಹಾಗೂ 175 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಟಿಡಿಪಿ-ಬಿಜೆಪಿ-ಜನಸೇನಾ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.