ADVERTISEMENT

PM ಮೋದಿ, ಹೇಮಾ ಮಾಲಿನಿ ವಿರುದ್ಧ ಹೇಳಿಕೆ: ಕಾಂಗ್ರೆಸ್, ಬಿಜೆಪಿ ಏಟು–ಎದಿರೇಟು

ಪಿಟಿಐ
Published 4 ಏಪ್ರಿಲ್ 2024, 13:43 IST
Last Updated 4 ಏಪ್ರಿಲ್ 2024, 13:43 IST
<div class="paragraphs"><p>ಅಮಿತ್ ಮಾಳವಿಯಾ ಮತ್ತು&nbsp;ರಣದೀಪ್ ಸುರ್ಜೇವಾಲಾ</p></div>

ಅಮಿತ್ ಮಾಳವಿಯಾ ಮತ್ತು ರಣದೀಪ್ ಸುರ್ಜೇವಾಲಾ

   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ದೇಶದ ಜನತೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಛತ್ತೀಸಗಢದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಚರಣ ದಾಸ್ ಮಹಂತ ಅವರು, ‘ನರೇಂದ್ರ ಮೋದಿಯನ್ನು ಯಾರಾದರೂ ದೊಣ್ಣೆಯಿಂದ ಬಡಿಯಬೇಕು’ ಎಂದಿದ್ದರು. 

ADVERTISEMENT

ಇದರೊಂದಿಗೆ ಮತ್ತೊಂದು ವಿಡಿಯೊವನ್ನು (ಸ್ಪಷ್ಟ ದಿನಾಂಕವಿಲ್ಲ) ಹಂಚಿಕೊಂಡಿರುವ ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಹರಿಯಾಣದ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ, ಸಂಸದೆ ಹೇಮಾ ಮಾಲಿನಿ ಕುರಿತು ಕೀಳುಮಟ್ಟದ ಮತ್ತು ಅಸಹ್ಯಕಾರಿ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿಯನ್ನು ತೆಗಳುವ ಸಂದರ್ಭದಲ್ಲೆಲ್ಲಾ ಅವರು ನಟಿ–ರಾಜಕಾರಣಿ ಹೇಮಾ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಚುನಾವಣೆ ಸಮೀಪಿಸುತ್ತಿದೆ. ದೇಶದ ಜನರು ಬಿಜೆಪಿ ಪರವಾಗಿದ್ದಾರೆ. ಇದನ್ನು ನೋಡಿ ಆಘಾತಗೊಂಡಿರುವ ಕಾಂಗ್ರೆಸ್ ಮುಖಂಡರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಹಿಳೆಯರ ಕುರಿತು ಹೇಳಿಕೆ ನೀಡುವುದರಲ್ಲಿ ಮತ್ತಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಹೇಮಾ ಮಾಲಿನಿ ಅವರು ಸೋನಿಯಾ ಗಾಂಧಿ ಅವರ ವಯಸ್ಸಿನವರೇ ಆಗಿದ್ದಾರೆ. ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಂಡ ಮಹಿಳೆ. ಅಂತಹವರ ಕುರಿತು ನೀಡಿರುವ ಹೇಳಿಕೆಯು ಸುರ್ಜೆವಾಲಾ ಅವರಿಗೆ ಸರಿ ಎನಿಸಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ವಿಡಿಯೊ ನೋಡಿ ಸತ್ಯ ಅರಿಯಿರಿ: ಸುರ್ಜೇವಾಲಾ

ಈ ಆರೋಪಗಳ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ರಣದೀಪ್ ಸುರ್ಜೇವಾಲಾ, ‘ಬಿಜೆಪಿಯು ಇಂಥ ಸುಳ್ಳು ಹಾಗೂ ಸತ್ಯ ಮರೆಮಾಚುವ ವಿಡಿಯೊಗಳನ್ನು ಹರಿಯಬಿಡುವ ಮೂಲಕ ದೇಶದಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿ ತಾಂಡವವಾಡುತ್ತಿರುವ ಯುವ ವಿರೋಧಿ, ರೈತ ವಿರೋಧಿ, ಬಡವರ ವಿರೋಧಿ ನೀತಿಗಳು ಹಾಗೂ ಸಂವಿಧಾನವನ್ನು ನಾಶಪಡಿಸುತ್ತಿರುವ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ವಿಡಿಯೊವನ್ನು ಸರಿಯಾಗಿ ನೋಡಿ ಸತ್ಯ ಅರಿಯಿರಿ. ಹೇಮಾ ಮಾಲಿನಿ ಕುರಿತು ನಮಗೆ ಅತ್ಯಂತ ಗೌರವವಿದೆ. ಅವರು ನಟ ಧರ್ಮೇಂದ್ರ ಅವರನ್ನು ವರಿಸಿದ್ದಾರೆ. ಹೀಗಾಗಿ ಅವರು ಅವರು ನಮ್ಮ ರಾಜ್ಯದ ಸೊಸೆ’ ಎಂದು ಹರಿಯಾಣದ ಸುರ್ಜೇವಾಲ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.