ADVERTISEMENT

LS Polls | ನಮ್ಮನ್ನು ಸೋಲಿಸಲು ಪೂರ್ಣ ಶಕ್ತಿ ಬಳಸುತ್ತಿರುವ ಕೇಂದ್ರ: ಅಬ್ದುಲ್ಲಾ

ಪಿಟಿಐ
Published 20 ಮಾರ್ಚ್ 2024, 10:26 IST
Last Updated 20 ಮಾರ್ಚ್ 2024, 10:26 IST
<div class="paragraphs"><p>ಒಮರ್‌ ಅಬ್ದುಲ್ಲಾ</p></div>

ಒಮರ್‌ ಅಬ್ದುಲ್ಲಾ

   

ಪಿಟಿಐ ಚಿತ್ರ

ಶ್ರೀನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಪೂರ್ಣ ಶಕ್ತಿಯನ್ನು ಉಪಯೋಗಿಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

ADVERTISEMENT

ನಗರದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿರುವ ಅವರು, 'ಎನ್‌ಸಿ ಅಭ್ಯರ್ಥಿಗಳ ಸೋಲನ್ನು ಖಾತ್ರಿಪಡಿಸಿಕೊಳ್ಳಬೇಕೆಂಬ ನವದೆಹಲಿಯ (ಕೇಂದ್ರ ಸರ್ಕಾರದ) ಉದ್ದೇಶ ಸ್ಪಷ್ಟವಾಗಿದೆ. ಆದರೆ, ನಾವು ಎದೆಗುಂದುವುದಿಲ್ಲ' ಎಂದಿದ್ದಾರೆ. 

ಚುನಾವಣೆ ಹಾಗೂ ಸವಾಲುಗಳನ್ನು ಎದುರಿಸಲು ತಮ್ಮ ಪಕ್ಷ ಸಂಪೂರ್ಣ ಸಜ್ಜಾಗಿದೆ ಎಂದಿರುವ ಅಬ್ದುಲ್ಲಾ, 'ಶೇರ್‌–ಎ–ಕಾಶ್ಮೀರ್‌ (ಎನ್‌ಸಿ ಸ್ಥಾಪಕ ಶೇಖ್‌ ಅಬ್ದುಲ್ಲಾ) ಅವರ ಅವಧಿಯಲ್ಲಿ, ಬಿಜೆಪಿ, ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಹಾಗೂ ಧಾರ್ಮಿಕ ನಾಯಕರು ಎನ್‌ಸಿ ವಿರುದ್ಧ ಒಂದಾಗಿದ್ದರು' ಎಂದು ಸ್ಮರಿಸಿದ್ದಾರೆ. ಮುಂದುವರಿದು, ಕಣಿವೆಯ ಜನರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, 'ಈ ಬಾರಿಯೂ ಬಿಜೆಪಿಯ ಎ, ಬಿ ಮತ್ತು ಸಿ ಟೀಮ್‌ಗಳು ಅದೇ ಹಾದಿಯಲ್ಲಿದ್ದು, ನಮ್ಮ ಪಕ್ಷದ ವಿರುದ್ಧ ಯೋಜನೆಗಳನ್ನು ರೂಪಿಸುತ್ತಿವೆ. ಎಲ್ಲ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಎನ್‌ಸಿ ವಿರುದ್ಧ ಮೇಲುಗೈ ಸಾಧಿಸಲು ಎಲ್ಲ ರೀತಿಯ ತಂತ್ರಗಳನ್ನೂ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, 'ನಾವು ಈ ಹಿಂದೆಯೂ ಇಂತಹ ಸವಾಲುಗಳನ್ನು ಎದುರಿಸಿದ್ದೇವೆ. ಹಿಂದಿನ ಚುನಾವಣೆ ಸಂದರ್ಭದಲ್ಲಿ ಎನ್‌ಸಿ ವಿರುದ್ಧ ಬಂದೂಕು ಪ್ರಯೋಗಿಸಲಾಗಿತ್ತು. ನಮ್ಮ ನಾಯಕರು ಮತ್ತು ಆಯ್ದ ಕೆಲವು ಕಾರ್ಯಕರ್ತರ ಮೇಲೆ ಉಗ್ರರು ದಾಳಿ ಮಾಡಿದ್ದರು. ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ನಾವು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು' ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.