ADVERTISEMENT

ತೆಲಂಗಾಣದ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಸ್ತಿ ₹ 4,568 ಕೋಟಿ!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 15:19 IST
Last Updated 22 ಏಪ್ರಿಲ್ 2024, 15:19 IST
ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ
ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ   

ಹೈದರಾಬಾದ್: ತೆಲಂಗಾಣದ ಚೆವೆಳ್ಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಂಡಾ ವಿಶ್ವೇಶ್ವರ ರೆಡ್ಡಿ (ಕೆವಿಆರ್‌) ಅವರು ಲೋಕಸಭಾ ಚುನಾವಣೆ ಕಣದಲ್ಲಿರುವ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರೆನಿಸಿದ್ದಾರೆ.

ಕೆವಿಆರ್‌ ಎಂದೇ ಜನಪ್ರಿಯರಾಗಿರುವ ವಿಶ್ವೇಶ್ವರ ರೆಡ್ಡಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ತಮ್ಮ ಕುಟುಂಬದ ಬಳಿ ₹ 4,568 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಕೆವಿಆರ್‌ ಬಳಿ ₹1,240 ಕೋಟಿ, ಪತ್ನಿ ಸಂಗೀತಾ ರೆಡ್ಡಿ ಬಳಿ ₹ 3,208 ಕೋಟಿ ಹಾಗೂ ಪುತ್ರನ ಬಳಿ ₹ 108 ಕೋಟಿ ಆಸ್ತಿ ಇರುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ. ದಂಪತಿಯು ಅಪೋಲೊ ಹಾಸ್ಪಿಟಲ್ಸ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌, ಪಿಸಿಆರ್‌ ಇನ್‌ವೆಸ್ಟ್‌ಮೆಂಟ್ಸ್, ಸೇಫ್ರನ್‌ ಸೊಲ್ಯುಷನ್ಸ್‌ ಒಳಗೊಂಡಂತೆ ವಿವಿಧ ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ. ಇವರ ಬಳಿ  ₹ 11 ಕೋಟಿ ಮೌಲ್ಯದ ರತ್ನ ಹಾಗೂ ಚಿನ್ನ ಇದೆ. ಸಂಗೀತಾ ಅವರು ಅಪೋಲೊ ಹೆಲ್ತ್‌ಕೇರ್‌ ಸಮೂಹದ ಸ್ಥಾಪಕ ಡಾ.ಪ್ರತಾಪ್‌ ಸಿ.ರೆಡ್ಡಿ ಅವರ ಪುತ್ರಿ. 

ADVERTISEMENT

ಐಟಿ ಉದ್ಯಮಿಯಾಗಿರುವ ಕೆವಿಆರ್‌ ಅಮೆರಿಕದಲ್ಲಿ ವ್ಯಾಸಂಗ ಮಾಡಿ ಅಲ್ಲೇ ಉದ್ಯೋಗದಲ್ಲಿದ್ದರು. 2013 ರಲ್ಲಿ ಭಾರತಕ್ಕೆ ಮರಳಿ, ರಾಜಕೀಯ ಪ್ರವೇಶ ಮಾಡಿದ್ದರು. 2014 ರಲ್ಲಿ ಚೆವೆಳ್ಳ ಕ್ಷೇತ್ರದಿಂದ ಬಿಆರ್‌ಎಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. 2019 ರಲ್ಲಿ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ, ಬಿಆರ್‌ಎಸ್‌ನ ಡಾ.ಜಿ. ರಂಜಿತ್‌ ರೆಡ್ಡಿ ಎದುರು ಸೋತಿದ್ದರು. ಈ ಬಾರಿ ಬಿಜೆಪಿ ಟಿಕೆಟ್‌ನಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಜಗನ್‌ ಆಸ್ತಿ ₹ 529 ಕೋಟಿ

ಅಮರಾವತಿ (ಆಂಧ್ರಪ್ರದೇಶ) (ಪಿಟಿಐ): ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು ₹ 529.50 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ ಪ್ರಮಾಣ ಶೇ 41 ರಷ್ಟು ಹೆಚ್ಚಳವಾಗಿದೆ.

2019ರ ಚುನಾವಣೆ ವೇಳೆ ಜಗನ್‌, ₹ 375.20 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಜಗನ್‌ ಅವರು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಪುಲಿವೆಂದುಲ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.