ADVERTISEMENT

LS Polls 2024: 10 ವರ್ಷಗಳ ಸಾಧನೆಗಳ ವರದಿ ಬಿಡುಗಡೆಗೆ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:17 IST
Last Updated 28 ಮಾರ್ಚ್ 2024, 15:17 IST
ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಅಲ್ಕಾ ಲಾಂಬಾ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು –ಪಿಟಿಐ ಚಿತ್ರ 
ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಅಲ್ಕಾ ಲಾಂಬಾ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು –ಪಿಟಿಐ ಚಿತ್ರ    

ನವದೆಹಲಿ: ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಮೌನ ತಾಳಿದ್ದಾರೆ ಎಂದು ಟೀಕಿಸಿರುವ ಕಾಂಗ್ರೆಸ್‌, ತಮ್ಮ ಸಚಿವಾಲಯದ 10 ವರ್ಷಗಳ ಸಾಧನೆ ಕುರಿತ ವಿವರಗಳನ್ನು ಜನರ ಮುಂದಿಡುವಂತೆ ಗುರುವಾರ ಒತ್ತಾಯಿಸಿದೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಅಲ್ಕಾ ಲಾಂಬಾ, ‘ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಅವರು ಇತ್ತೀಚೆಗೆ ಕೇಳಿದ್ದ ಹಲವಾರು ಪ್ರಶ್ನೆಗಳಿಗೆ ಇರಾನಿ ಅವರು ಉತ್ತರ ನೀಡಿಯೇ ಇಲ್ಲ’ ಎಂದು ಟೀಕಿಸಿದರು.

‘ಸಚಿವೆ ಸ್ಮೃತಿ ಇರಾನಿ ಅವರು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಸಚಿವಾಲಯದ ಸಾಧನೆಗಳ ವರದಿ ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆವು. ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ, ಈ ಎಲ್ಲ ವೈಫಲ್ಯಗಳಿಗೆ ಇರಾನಿ ಅವರನ್ನೇ ಉತ್ತರದಾಯಿಯನ್ನಾಗಿ ಮಾಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ADVERTISEMENT

‘ಕೋವಿಡ್‌–19 ಪಿಡುಗಿನ ವೇಳೆ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರ ಕುರಿತ ದತ್ತಾಂಶ ಇಲ್ಲ ಎಂಬುದಾಗಿ ಸಂಸತ್‌ನಲ್ಲಿ ಇರಾನಿ ಉತ್ತರಿಸಿದ್ದರು. ಇಲ್ಲಿ ಕೂಡ ಭ್ರಷ್ಟಾಚಾರದ ದುರ್ನಾತ ಬಡಿಯುತ್ತಿದೆ’ ಎಂದು ಟೀಕಿಸಿದ ಅವರು, ‘ಈಗಲಾದರೂ, ಅವರು ತಮ್ಮ ಸಚಿವಾಲಯದ 10 ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸುತ್ತಾರೆ ಎಂಬ ಆಶಯ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದರು.

ಸಚಿವೆ ಸ್ಮೃತಿ ಇರಾನಿ ಅವರು ಸುದ್ದಿಗೋಷ್ಠಿ ನಡೆಸಿ ಸಾಧನೆಗಳನ್ನು ವಿವರಿಸಬೇಕು. ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಉತ್ತರ ನೀಡುವುದಲ್ಲ
ಅಲ್ಕಾ ಲಾಂಬಾ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.