ADVERTISEMENT

ಭ್ರಷ್ಟಾಚಾರ ಕೊನೆಗಾಣಿಸುವುದು ಮೋದಿ ಬಯಕೆ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ

ಪಿಟಿಐ
Published 8 ಏಪ್ರಿಲ್ 2024, 6:37 IST
Last Updated 8 ಏಪ್ರಿಲ್ 2024, 6:37 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಅರಿಯಲೂರ್ (ತಮಿಳುನಾಡು): 'ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಹೋರಾಡುತ್ತಿದ್ದಾರೆ' ಎಂದಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, 'ಇಂಡಿ ಒಕ್ಕೂಟದ ನಾಯಕರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಇಲ್ಲವೇ ಜಾಮೀನಿನ ಮೇಲೆ ಹೊರಗಿದ್ದಾರೆ' ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷಗಳ ನಾಯಕರಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಂಥವರು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರನ್ನು ಅಭಿವೃದ್ಧಿಯ ದ್ಯೋತಕವಾದ ಮೋದಿಗೆ ಹೋಲಿಸುವುದು ವ್ಯತಿರಿಕ್ತ ಎನಿಸುತ್ತದೆ ಎಂದಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡ ನಡ್ಡಾ, 'ಭ್ರಷ್ಟಾಚಾರವನ್ನು ಅಂತ್ಯಗೊಳಿಸಲು ಬಯಸಿದ್ದೇನೆ ಎಂದು ಮೋದಿ ಹೇಳುತ್ತಾರೆ. ಆದರೆ, ಇಂಡಿ ನಾಯಕರು ಭ್ರಷ್ಟರನ್ನು ರಕ್ಷಿಸುತ್ತೇವೆ ಎನ್ನುತ್ತಾರೆ. ಅದು ಅವರು ಕೆಲಸ ಮಾಡುವ ವಿಧಾನ. ತಮಿಳುನಾಡಿನ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಮುಳುಗಿವೆ. ಭ್ರಷ್ಟಾಚಾರದ ಆರೋಪಗಳಿಂದ ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿವೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಅರಿಯಲೂರ್ ಸಮೀಪದ ತಿರುಚಿರಾಪಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ ಎಂಬ ಕಾರಣಕ್ಕೆ ಸ್ಥಳೀಯ ಪೊಲೀಸರು, ಬಿಜೆಪಿ ಬಯಸಿದ್ದ ಮಾರ್ಗದಲ್ಲಿ ನಡ್ಡಾ ಅವರ ರೋಡ್‌ಶೋ ನಡೆಸಲು ಅವಕಾಶ ನಿರಾಕರಿಸಿದ್ದರು. ಇದರಿಂದಾಗಿ, ದಿನವಿಡೀ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.