ADVERTISEMENT

ಲೋಕಸಭಾ ಚುನಾವಣೆ: ಹೆಲಿಕಾಪ್ಟರ್‌ಗಳಿಗೆ ಭಾರಿ ಬೇಡಿಕೆ

ಪ್ರಚಾರ ಕಾರ್ಯಕ್ಕೆ ಬಳಕೆ ಹೆಚ್ಚಳ * ಪ್ರತಿ ಗಂಟೆಗೆ ವಿಧಿಸುವ ಬಾಡಿಗೆಯೂ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 12:27 IST
Last Updated 20 ಮಾರ್ಚ್ 2024, 12:27 IST
<div class="paragraphs"><p>&nbsp;ಹೆಲಿಕಾಪ್ಟರ್‌</p></div>

 ಹೆಲಿಕಾಪ್ಟರ್‌

   

ಮುಂಬೈ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಕಂಡುಬರುತ್ತಿದ್ದರೆ, ಮತ್ತೊಂದೆಡೆ ಪ್ರಚಾರ ಕಾರ್ಯಕ್ಕಾಗಿ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಅದರಲ್ಳೂ, ಎರಡು ಎಂಜಿನ್‌ಗಳ ಹೆಲಿಕಾಪ್ಟರ್‌ಗಳಿಗೆ ಹೆಚ್ಚು ಬೇಡಿಕೆ ಇದ್ದರೆ, ಪ್ರತಿ ಗಂಟೆಗೆ ಪಡೆಯುವ ಬಾಡಿಗೆ ಮೊತ್ತದಲ್ಲಿಯೂ ಗಮನಾರ್ಹ ಹೆಚ್ಚಳ ಕಂಡುಬಂದಿದೆ.

ADVERTISEMENT

ರೋಟರಿ ವಿಂಗ್ ವಿಮಾನಗಳಿಗೆ ದಿಢೀರ್‌ ಬೇಡಿಕೆ ಕಂಡುಬಂದಿದೆ. ಸುಲಭವಾಗಿ ಲಭ್ಯವಾಗುವ ಜೊತೆಗೆ, ದೂರದ ಪ್ರದೇಶಗಳನ್ನು ತಲುಪಲು ಹೆಚ್ಚು ಅನುಕೂಲ ಎಂಬ ಕಾರಣಕ್ಕೆ ಇವುಗಳಿಗೆ ಬೇಡಿಕೆ ಹೆಚ್ಚು. ಉಳಿದವುಗಳಿಗೆ ಹೋಲಿಸಿದಲ್ಲಿ, ರೋಟರಿ ವಿಂಗ್‌ ವಿಮಾನಗಳಿಗೆ ಹೆಚ್ಚು ಬಾಡಿಗೆ ಇದೆ. ಆದಾಗ್ಯೂ, ಅವುಗಳಿಗೆ ಬೇಡಿಕೆ ಕುಸಿದಿಲ್ಲ.

ದೇಶದಲ್ಲಿ, ನಾಗರಿಕ ಯಾನ ಉದ್ದೇಶಕ್ಕಾಗಿ ಹೆಲಿಕಾಪ್ಟರ್‌ ಸೇವೆ ಒದಗಿಸಲು ನೋಂದಣಿಯಾಗಿರುವ ಸಂಸ್ಥೆಗಳ ಸಂಖ್ಯೆ 250. ಇವುಗಳ ಪೈಕಿ, ಪೂರ್ವ ನಿಗದಿತವಲ್ಲದ ಹೆಲಿಕಾಪ್ಟರ್‌ ಸೇವೆ ಒದಗಿಸುವ ಸಂಸ್ಥೆಗಳ (ಎನ್‌ಎಸ್‌ಒಪಿ) ಸಂಖ್ಯೆ 181. ಸರ್ಕಾರಿ/ಸಾರ್ವಜನಿಕ ವಲಯದ ಕಂಪನಿಗಳು 26 ಇದ್ದರೆ, ಉಳಿದ ಸಂಸ್ಥೆಗಳು ಖಾಸಗಿ ಕಂಪನಿಗಳಾಗಿವೆ. 

‘ಪ್ರಸಕ್ತ ಚುನಾವಣೆ ಸಂದರ್ಭದಲ್ಲಿ 70 ರಿಂದ 100 ಹೆಲಿಕಾಪ್ಟರ್‌ಗಳು ಲಭ್ಯವಾಗಬಹುದು’ ಎಂದು ವಿಮಾನಯಾನ ಕ್ಷೇತ್ರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ರಾಜಕೀಯ ಪಕ್ಷಗಳು ತಮ್ಮ ಉನ್ನತ ನಾಯಕರು, ತಾರಾ ಪ್ರಚಾರಕರನ್ನು ಕರೆದೊಯ್ಯುವುದಕ್ಕಾಗಿ  ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯುತ್ತವೆ. ಸಿಂಗಲ್‌ ಇಲ್ಲವೇ ಡಬಲ್‌ ಎಂಜಿನ್‌ ಚಾಲಿತ ಹೆಲಿಕಾಪ್ಟರ್‌ಗಳು, ಮೂರು, ಆರು ಅಥವಾ ಎಂಟರಿಂದ ಹಿಡಿದು 11 ಆಸನಗಳ ಸಾಮರ್ಥ್ಯದ ಹೆಲಿಕಾಪ್ಟರ್‌ಗಳನ್ನು ಬಾಡಿಗೆ ಪಡೆಯಲಾಗುತ್ತದೆ’ ಎಂದು ಇವೇ ಮೂಲಗಳು ಹೇಳಿವೆ.

ಬೆಲ್‌, ಯುರೋಕಾಪ್ಟರ್, ಡಾಫಿನ್, ರಾಬಿನ್‌ಸನ್‌, ಸಿಕೋರ್‌ಸ್ಕೈ, ಆಗಸ್ಟ್, ಹೆಲಿಕಾಪ್ಟರ್‌ ತಯಾರಿಸುವ ಪ್ರಮುಖ ಕಂಪನಿಗಳಾಗಿವೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಹೆಲಿಕಾಪ್ಟರ್‌ಗಳ ಮಾದರಿ, ಅದನ್ನು ತಯಾರಿಸಿದ ಕಂಪನಿ ಆಧಾರದ ಮೇಲೆ ಪ್ರತಿ ಗಂಟೆಗೆ ₹3 ಲಕ್ಷದಿಂದ ₹5 ಲಕ್ಷ ಬಾಡಿಗೆ ವಿಧಿಸಲಾಗುತ್ತಿದೆ ಎಂದು ಹೆಲಿಕಾಪ್ಟರ್‌ಗಳನ್ನು ಬಾಡಿಗೆ ನೀಡುವ ಕಂಪನಿಯೊಂದರ ಮೂಲಗಳು ಹೇಳಿವೆ.

‘ಭಾರತದ ಚುನಾವಣೆಗಳಲ್ಲಿ ನಡೆಯುವ ಪ್ರಚಾರ ಕಾರ್ಯದ ವೈಖರಿ ಯಾವುದೇ ಬಾಲಿವುಡ್‌ ಚಿತ್ರಕ್ಕಿಂತಲೂ ಕಡಿಮೆಯೇನಿಲ್ಲ. ಮತ ಯಾಚನೆಯು ಸಾಕಷ್ಟು ನಾಟಕೀಯತೆ, ಭಾವನಾತ್ಮಕತೆ ಹಾಗೂ ಚಟುವಟಕೆಗಳಿಂದ ಕೂಡಿರುತ್ತದೆ’ ಎಂದು ಮುಂಬೈ ಮೂಲದ, ಹಿರಿಯ ರಾಜಕೀಯ ವಿಶ್ಲೇಷಕ ಬಿ.ಎನ್‌.ಕುಮಾರ್‌ ಹೇಳುತ್ತಾರೆ.

‘ಧೂಳೆಬ್ಬಿಸುತ್ತಾ, ಅಬ್ಬರಿಸುತ್ತಾ ಸಂಚರಿಸುವ ಹೆಲಿಕಾಪ್ಟರ್‌ಗಳ ಮೂಲಕ ರಾಜಕಾರಣಿಗಳು ಬಂದು ಮತ ಕೇಳುವ ದೃಶ್ಯಗಳು ಚುನಾವಣೆಗಳಲ್ಲಿ ಸಾಮಾನ್ಯ. ಅದರಲ್ಲೂ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ನಾಟಕೀಯತೆ ತುಸು ಹೆಚ್ಚು’ ಎಂದೂ ಕುಮಾರ್‌ ಹೇಳುತ್ತಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಲಿಕಾಪ್ಟರ್‌ಗಳ ಬಳಕೆ ಸಮಾನ ಅವಕಾಶವನ್ನು ಪ್ರತಿನಿಧಿಸುವುದಿಲ್ಲ. ಹಣಬಲವಿರುವ ಅಥವಾ ಪ್ರಾಯೋಚಕರನ್ನು ಪಡೆಯುವ ಸಾಮರ್ಥ್ಯವಿರುವ ಪಕ್ಷಗಳು ಹೆಲಿಕಾಪ್ಟರ್‌ಗಳನ್ನು ಬಾಡಿಗೆ ಪಡೆಯುತ್ತವೆ

-ಬಿ.ಎನ್‌.ಕುಮಾರ್‌ ಹಿರಿಯ ರಾಜಕೀಯ ವಿಶ್ಲೇಷಕ

ಹೆಲಿಕಾಪ‍್ಟರ್‌ಗಳಿಗೆ ಬೇಡಿಕೆ ಹೆಚ್ಚಲು ಕಾರಣ

* ಆಧುನಿಕ ಹೆಲಿಕಾಪ್ಟರ್‌ಗಳು ಹೆಚ್ಚು ಸುರಕ್ಷಿತ ಹಾಗೂ ಅಧಿಕ ಸಾಮರ್ಥ್ಯ ಹೊಂದಿವೆ. 

* ತೀವ್ರವಾದ ಹವಾಮಾನ ವೈಪರೀತ್ಯದಂತಹ ಸನ್ನವೇಶಗಳಲ್ಲಿಯೂ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ಮಾಡುತ್ತವೆ

* ಗಣ್ಯರು ಹಿರಿಯ ರಾಜಕಾರಣಿಗಳು ಹಾಗೂ ತಾರಾ ಪ್ರಚಾರಕರನ್ನು ವೇಗವಾಗಿ ಕರೆದೊಯ್ಯಲು ಆಧುನಿಕ ಹೆಲಿಕಾಪ್ಟರ್‌ಗಳಿಂದ ಸಾಧ್ಯ

* ಭೌಗೋಳಿಕವಾಗಿ ಬಹು ವಿಸ್ತಾರವಾದ ಪ್ರದೇಶಗಳನ್ನು ತಲುಪಲು ಇವು ಸಹಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.