
ಹರಿಯಾಣದ ಅಂಬಾಲಾದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ಅಂಬಾಲಾ/ಸೋನಿಪತ್: ಕಾಂಗ್ರೆಸ್ ಪಕ್ಷವು 370ನೇ ವಿಧಿಯನ್ನು ಮರಳಿ ಜಾರಿಗೆ ತರುವ ಕನಸನ್ನು ಮರೆಯಬೇಕು. ಅದನ್ನು ಖಬರಸ್ತಾನ್‌ನಲ್ಲಿ (ಸ್ಮಶಾನ) ಸಮಾಧಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಹರಿಯಾಣದ ಗೋಹಾನಾದಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಕಾಂಗ್ರೆಸ್‌ನ ದೇಶದ್ರೋಹಿ ಕಾರ್ಯಸೂಚಿ ಈಗ ಗುಟ್ಟಾಗಿ ಉಳಿದಿಲ್ಲ. ಮೋದಿ 10 ವರ್ಷದಲ್ಲಿ ಏನು ಮಾಡಿದ್ದಾರೋ ನಾವು ಅಧಿಕಾರಕ್ಕೆ ಬಂದ ನಂತರ ಅದನ್ನು ಬದಲಿಸುತ್ತೇವೆ ಎಂದು ಅವರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ’ ಎಂದು ನುಡಿದರು.
370ನೇ ವಿಧಿಯನ್ನು ಮತ್ತೆ ಜಾರಿಗೆ ತರುವ ಅವರ ಕನಸು ಎಂದೂ ಈಡೇರುವುದಿಲ್ಲ ಎಂದು ಪ್ರತಿಪಾದಿಸಿದರು.
ಹರಿಯಾಣದಲ್ಲಿ ತಮ್ಮ ಮೊದಲ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಹಿಂದಿನ ಕಾಂಗ್ರೆಸ್ ಸರ್ಕಾರ ದುರ್ಬಲ ಸರ್ಕಾರವಾಗಿತ್ತು. ಮೋದಿ ಅವರ ಬಲಿಷ್ಠ ಸರ್ಕಾರವು 370ನೇ ವಿಧಿಯ ಗೋಡೆಯನ್ನು ಕೆಡವಿತು ಮತ್ತು ಅದರಿಂದ ಜಮ್ಮು ಕಾಶ್ಮೀರವು ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಯುತ್ತಿದೆ’ ಎಂದು ಹೇಳಿದರು.
‘ಕಾಂಗ್ರೆಸ್ ಚರಿತ್ರೆ ಎಂದರೆ, ಅದು ಭಾರತದ ಸೈನ್ಯ ಮತ್ತು ಸೈನಿಕರಿಗೆ ವಿಶ್ವಾಸದ್ರೋಹವೆಸಗಿದ ಕಥೆ. ‘ಜೀಪ್ ಹಗರಣ’ ಕಾಂಗ್ರೆಸ್ ಅವಧಿಯ ಮೊದಲ ಹಗರಣವಾಗಿತ್ತು’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವವರೆಗೆ ಹೊಸ ಹೊಸ ಹಗರಣಗಳಿಗೆ ಕಾರಣವಾಯಿತು. ಬೊಫೋರ್ಸ್ ಹಗರಣ, ಸಬ್‌ಮರಿನ್ ಹಗರಣ, ಹೆಲಿಕಾಪ್ಟರ್ ಹಗರಣ.. ಹೀಗೆ ಕಾಂಗ್ರೆಸ್, ಸೇನೆಯನ್ನು ದುರ್ಬಲವಾಗಿ ಇಟ್ಟಿತ್ತು. ಯಾಕೆ ಗೊತ್ತಾ? ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ನೆಪದಲ್ಲಿ ಬೃಹತ್ ಮೊತ್ತ ಗಳಿಸಬಹುದಲ್ಲ’ ಎಂದು ಆರೋಪಿಸಿದರು.
* ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಎಂಎಸ್‌ಪಿಗಾಗಿ 10 ವರ್ಷಗಳಲ್ಲಿ ₹7.5 ಲಕ್ಷ ಕೋಟಿ ಖರ್ಚು ಮಾಡಿದರೆ, ಬಿಜೆಪಿ ಸರ್ಕಾರವು ಎಂಎಸ್‌ಪಿಗಾಗಿ ₹20 ಲಕ್ಷ ಕೋಟಿ ಖರ್ಚು ಮಾಡಿದೆ.
* ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಬ್ಬು ಬೆಳೆಗಾರರ ಬಾಕಿ ಮೊತ್ತವು ₹60 ಸಾವಿರ ಕೋಟಿವರೆಗೆ ಇತ್ತು. ಪ್ರಸಕ್ತ ವರ್ಷದಲ್ಲಿಯೇ ನಾವು ₹1.14 ಲಕ್ಷ ಕೋಟಿ ಬಾಕಿ ಪಾವತಿಸಿದ್ದೇವೆ.
* ಪಾಕಿಸ್ತಾನದ ಕೈಯಲ್ಲಿ ಹಿಂದೆ ಬಾಂಬ್‌ಗಳಿದ್ದವು. ಈಗ ಭಿಕ್ಷಾ ಪಾತ್ರೆ ಇದೆ.
* ಕಾಂಗ್ರೆಸ್ ಅವಧಿಯಲ್ಲಿ ನಮ್ಮ ಸೈನಿಕರ ಬಳಿ ಉತ್ತಮ ಬಟ್ಟೆ, ಶೂ, ಬುಲೆಟ್ ಪ್ರೂಫ್ ಜಾಕೆಟ್, ರೈಫಲ್‌ಗಳು ಇರಲಿಲ್ಲ. ಅವರ ಕೈಗೆ ಲಾಠಿ ಕೊಟ್ಟು, ಅವುಗಳೊಂದಿಗೆ ಉಗ್ರರ ಗುಂಡುಗಳನ್ನು ಎದುರಿಸಲು ಹೇಳಲಾಯಿತು. ಮೋದಿ ಅಧಿಕಾರಕ್ಕೆ ಬಂದ ನಂತರ, ನಮ್ಮ ಸೈನಿಕರನ್ನು ಸ್ವಾವಲಂಬಿಗಳನ್ನಾಗಿಸಲು ಆಂದೋಲನ ಆರಂಭಿಸಲಾಯಿತು. ಇಂದು ಅವರಿಗೆ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ.
* ನಿವೃತ್ತ ಸೈನಿಕರಿಗೆ ವಿಶ್ವಾಸಘಾತುಕತನ ಮಾಡಿದ ಕಾಂಗ್ರೆಸ್, ‘ಒಂದು ಪದವಿ, ಒಂದು ಪಿಂಚಣಿ’ ವಿಚಾರವನ್ನು ದಶಕಗಳ ಕಾಲ ಹಾಗೆಯೇ ಇಟ್ಟುಕೊಂಡಿತ್ತು. 2013ರಲ್ಲಿ, ಇನ್ನೇನು ಮೋದಿ ತಮಗೆ ದೊಡ್ಡ ಸವಾಲಾಗಿದ್ದಾರೆ ಎಂದು ಅನಿಸಿದಾಗ, ಬಜೆಟ್‌ನಲ್ಲಿ ₹500 ಕೋಟಿ ಮೀಸಲಿಟ್ಟರು.
* ‘ಒಂದು ಪದವಿ, ಒಂದು ಪಿಂಚಣಿ’ ಭರವಸೆಯನ್ನು ಈಡೇರಿಸಿದ ಮೋದಿ ಸರ್ಕಾರ, ಅದರ ಅಡಿಯಲ್ಲಿ ₹1.2 ಲಕ್ಷ ಕೋಟಿ ವಿನಿಯೋಗಿಸಿತು.
* ಲೋಕಸಭಾ ಚುನಾವಣೆ ಕುರುಕ್ಷೇತ್ರ ಯುದ್ಧವಿದ್ದಂತೆ. 2024ರ ಕುರುಕ್ಷೇತ್ರದಲ್ಲಿ ಒಂದು ಕಡೆ ಅಭಿವೃದ್ಧಿ ಇದ್ದರೆ, ಮತ್ತೊಂದು ಕಡೆ ವೋಟ್ ಜಿಹಾದ್ ಇದೆ.
* ಹೆಸರು ಬದಲಾಯಿಸುವುದರಿಂದ ವಾಸ್ತವ ಬದಲಾಗುವುದಿಲ್ಲ. ‘ಇಂಡಿ’ ಕೂಟವು ಭ್ರಷ್ಟರ ಗುಂಪಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.