ADVERTISEMENT

ಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 0:38 IST
Last Updated 28 ಏಪ್ರಿಲ್ 2024, 0:38 IST
ಭೋಜಶಾಲಾ ಸಂಕೀರ್ಣ
ಭೋಜಶಾಲಾ ಸಂಕೀರ್ಣ   
ಧಾರ್‌ ಲೋಕಸಭಾ ಕ್ಷೇತ್ರವು 2014 ರಿಂದಲೂ ಬಿಜೆಪಿ ಹಿಡಿತದಲ್ಲಿದೆ. ಕಾಂಗ್ರೆಸ್‌ ಇಲ್ಲಿ 2009 ರಲ್ಲಿ ಕೊನೆಯದಾಗಿ ಗೆಲುವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್‌ನ ರಾಧೇಶ್ಯಾಮ್‌ ಮುವೆಲ್‌ ಮತ್ತು ಬಿಜೆಪಿಯ ಸಾವಿತ್ರಿ ಠಾಕೂರ್‌ ಮಧ್ಯೆ ನೇರ ಹಣಾಹಣಿ ನಡೆಯಲಿದೆ.

ಧಾರ್ (ಮಧ್ಯಪ್ರದೇಶ): ಭೋಜಶಾಲಾ-ಕಮಲ್ ಮೌಲಾ ಮಸೀದಿ ವಿವಾದವು ಲೋಕಸಭಾ ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಧ್ಯಪ್ರದೇಶದ ಧಾರ್ ಲೋಕಸಭಾ ಕ್ಷೇತ್ರದ ಜನರು ಭಿನ್ನ ಅಭಿಪ್ರಾಯ ಹೊಂದಿದ್ದಾರೆ.

ಈ ವಿವಾದವು ಒಂದು ಪಕ್ಷಕ್ಕೆ ಲಾಭ ಉಂಟುಮಾಡಲಿದೆ ಎಂದು ಕೆಲವರು ಹೇಳಿದರೆ, ನಿರುದ್ಯೋಗದಂತಹ ವಿಷಯಗಳು ಈ ಮಾತ್ರ ಈ ಚುನಾವಣೆಯಲ್ಲಿ ಚರ್ಚೆಯಲ್ಲಿವೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಭೋಜಶಾಲಾ ಸಂಕೀರ್ಣವು ಮಧ್ಯಯುಗದ ಒಂದು ಸ್ಮಾರಕ. ಇಲ್ಲಿರುವುದು ವಾಗ್ದೇವಿ (ಸರಸ್ವತಿ) ದೇವಸ್ಥಾನ ಎಂದು ಹಿಂದೂಗಳು ಭಾವಿಸಿದ್ದರೆ, ಮುಸ್ಲಿಂ ಸಮುದಾಯವು ಇದು ಕಮಲ್ ಮೌಲಾ ಮಸೀದಿ ಎಂದು ನಂಬಿದೆ.

ADVERTISEMENT

ಭೋಜಶಾಲಾ ಸಂಕೀರ್ಣದಲ್ಲಿ ಸಮೀಕ್ಷಾ ಕಾರ್ಯ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಕಳೆದ ತಿಂಗಳ 11 ರಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿತ್ತು. ಮಾರ್ಚ್‌ 22 ರಿಂದ ಇಲ್ಲಿ ಸಮೀಕ್ಷಾ ಕಾರ್ಯ ನಡೆಯುತ್ತಿದೆ. 

2003ರ ಏಪ್ರಿಲ್‌ 7ರಂದು ಎಎಸ್‌ಐ ಹೊರಡಿಸಿದ್ದ ಆದೇಶದ ಅನ್ವಯ ಹಿಂದೂಗಳಿಗೆ ಈ ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಅವಕಾಶವಿದ್ದು, ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಭೋಜಶಾಲಾ ಸಂಕೀರ್ಣವು ಧಾರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಎಸ್‌ಟಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಮತದಾನ ಮೇ 13 ರಂದು ನಡೆಯಲಿದೆ.

‘ಭೋಜಶಾಲಾ ವಿವಾದವು ನಮಗೆ ಚುನಾವಣಾ ವಿಷಯವಲ್ಲ. ಆದರೆ ಅದು ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ವಿಚಾರ. ಅಯೋಧ್ಯೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಬಗೆಹರಿದಂತೆ ಭೋಜಶಾಲಾ ವಿವಾದಕ್ಕೆ ಶಾಂತಿಯುತ ಪರಿಹಾರವನ್ನು ನಾವು ಬಯಸುತ್ತೇವೆ’ ಎಂಬುದು ಸ್ಥಳೀಯ ನಿವಾಸಿ ಅಂಜು ಮಿತ್ತಲ್‌ ಅವರ ಅಭಿಪ್ರಾಯ.

ಧಾರ್‌ನ ಮತ್ತೊಬ್ಬ ನಿವಾಸಿ ಅಜರ್ ಖಾನ್ ಕೂಡ ಈ ವಿವಾದವು ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹೇಳಿದ್ದು, ಈ ಪ್ರದೇಶದ ಅಭಿವೃದ್ಧಿಯತ್ತ ಎಲ್ಲರೂ ಗಮನ ಹರಿಸಬೇಕೆಂದು ಬಯಸಿದ್ದಾರೆ. ‘ನಮ್ಮ ನಗರದಲ್ಲಿ ಭ್ರಾತೃತ್ವ ಉಳಿಯಬೇಕೆಂದು ಬಯಸುತ್ತೇವೆ’ ಎಂದು ಅವರು ಹೇಳಿದರು. 

ಆದರೆ ವ್ಯಾಪಾರಿ ನೂರ್‌ ಖುರೇಷಿ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ಈ ವಿವಾದವೇ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ. ‘ಭೋಜಶಾಲಾ ವಿವಾದವು ಪ್ರಮುಖ ವಿಷಯವಾಗಿದ್ದು, ಚುನಾವಣಾ ಸಮೀಕರಣದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅರ್ಚನಾ ಬನ್ಸಲ್‌ ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.