ADVERTISEMENT

ಚುನಾವಣೆ ಎದುರಿಸಲು ಪ್ರಧಾನಿ ಮೋದಿಗೆ ಭಯ: ಉದ್ಧವ್ ಬಣದ ಶಿವಸೇನಾ

ಪಿಟಿಐ
Published 23 ಮಾರ್ಚ್ 2024, 16:25 IST
Last Updated 23 ಮಾರ್ಚ್ 2024, 16:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಲೋಕಸಭೆ ಚುನಾವಣೆ ಎದುರಿಸುವ ಭೀತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕುತ್ತಿದ್ದಾರೆ ಎಂದು ಶಿವಸೇನಾ (ಯುಬಿಟಿ) ಆರೋಪಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ಹಿನ್ನೆಲೆಯಲ್ಲಿ ಪಕ್ಷವು ತನ್ನ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಪ್ರಧಾನಿಯನ್ನು ಗುರಿಯಾಗಿಸಿದೆ.

ADVERTISEMENT

ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಮೋದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್‌ಗೆ ಹೋಲಿಸಿದ ಕೆಲವೇ ದಿನಗಳಲ್ಲಿ ಈ ಟೀಕೆಗಳು ಬಂದಿವೆ. ಸರ್ವಾಧಿಕಾರಿಯೊಬ್ಬರು ಇಂತಹ ಕೃತ್ಯಗಳಿಗೆ ಕೈಹಾಕಿರುವುದರಿಂದ ಕೇಜ್ರಿವಾಲ್ ಅವರ ಬಂಧನ ಆಶ್ಚರ್ಯವೇನಿಲ್ಲ ಎಂದು ಪಕ್ಷ ಹೇಳಿಕೊಂಡಿದೆ.

ಸಂಪಾದಕೀಯದಲ್ಲಿ ಪಕ್ಷವು ಮೋದಿಯನ್ನು ಮಹಾಭಾರತದ ಕಂಸನಿಗೆ ಹೋಲಿಸಿದೆ.

‘ಮೋದಿ ಭಯಗೊಂಡಿದ್ದಾರೆ. ಇದಕ್ಕಾಗಿಯೇ ಅವರು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ಪಕ್ಷ ಹೇಳಿದೆ.

‘ಔರಂಗಜೇಬನು ತನ್ನ ಎದುರಾಳಿಗಳನ್ನು ಸಾಮಂತರನ್ನಾಗಿ ಮಾಡಿಕೊಳ್ಳುತ್ತಿದ್ದ ಅಥವಾ ಅವರನ್ನು ನಿರ್ಮೂಲನೆ ಮಾಡುತ್ತಿದ್ದ. ಅದೇ ರೀತಿಯ ಔರಂಗಜೇಬ ಪ್ರವೃತ್ತಿಯನ್ನು ಕೇಂದ್ರ ಸರ್ಕಾರದಲ್ಲಿ ಕಾಣಬಹುದಾಗಿದೆ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ವಿರೋಧದ ಧ್ವನಿ ಇರಬಾರದು ಎಂಬ ಆಡಳಿತಗಾರರ ನೀತಿ ಅಸ್ತಿತ್ವದಲ್ಲಿರುವುದು ಹಾನಿಕಾರಕವಾಗಿದೆ. ಚೀನಾ ಮತ್ತು ರಷ್ಯಾದಲ್ಲಿ ವಿರೋಧ ಪಕ್ಷದ ನಾಯಕರನ್ನು ಕೊಲ್ಲಲಾಗುತ್ತದೆ ಅಥವಾ ಅವರು ಕಣ್ಮರೆಯಾಗುತ್ತಾರೆ. ಆದರೆ, ಭಾರತದಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತದೆ ಮತ್ತು ತಿಂಗಳುಗಟ್ಟಲೆ ಜೈಲಿಗೆ ಕಳುಹಿಸಲಾಗುತ್ತದೆ’ ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷ ಹೇಳಿದೆ.

2014ರಿಂದ ಕೇಂದ್ರೀಯ ಸಂಸ್ಥೆಗಳ ಶೇ. 95ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವೇ ಇದೆ. ಬಿಜೆಪಿ ತನ್ನ ವಿರುದ್ಧದ ವಿರೋಧಿಗಳನ್ನು ಮುಗಿಸಲು ಮತ್ತು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಕ್ಷ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.