ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಪಿಟಿಐ ಚಿತ್ರ
ಜೈಪುರ: ಭಾರತದ ಭೂ ಪ್ರದೇಶದೊಳಕ್ಕೆ ಚೀನಾ ನುಗ್ಗುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿದ್ರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ (ಏ.4) ಆರೋಪಿಸಿದ್ದಾರೆ.
ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮೋದಿಯವರನ್ನು 'ಸುಳ್ಳಿನ ಸರದಾರ' ಎಂದು ಕರೆದಿದ್ದಾರೆ.
'ಮೋದಿ ಅವರು '56 ಇಂಚಿನ ಎದೆ ಹೊಂದಿರುವುದಾಗಿ ಹಾಗೂ ಯಾರಿಗೂ ಹೆದರುವುದಿಲ್ಲ' ಎಂದು ಹೇಳುತ್ತಾರೆ. ಹೆದರಲ್ಲ ಎಂದಮೇಲೆ, ನಮ್ಮ ಬಹುದೊಡ್ಡ ಭೂ ಭಾಗವನ್ನು ಚೀನಾಗೆ ಬಿಟ್ಟುಕೊಟ್ಟಿರುವುದು ಏಕೆ? ಅವರು (ಚೀನಾ) ಒಳಗೆ ನುಗ್ಗುತ್ತಿದ್ದಾರೆ. ನೀವು ನಿದ್ರಿಸುತ್ತಿದ್ದೀರಿ. ನಿದ್ರೆ ಮಾತ್ರೆ ತೆಗೆದುಕೊಂಡಿದ್ದೀರಾ?' ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
'ಮೋದಿ ದೇಶಕ್ಕಾಗಿ ಚಿಂತಿಸುವುದಿಲ್ಲ. ಗಾಂಧಿ ಕುಟುಂಬದವರನ್ನು ತೆಗಳುತ್ತಾರೆ ಅಷ್ಟೇ' ಎಂದಿರುವ ಖರ್ಗೆ, 'ಹಿಂಸಿಸುವ ಮೂಲಕ ದೇಶದ ಜನರನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಮೋದಿ ಬಯಸುತ್ತಾರೆ. ಸದಾ ಸುಳ್ಳುಗಳನ್ನೇ ಹೇಳುವ ಅವರು, ಸುಳ್ಳುಗಳ ಸರದಾರ' ಎಂದು ಕರೆದಿದ್ದಾರೆ.
'1989ರಿಂದ ಗಾಂಧಿ ಕುಟುಂಬದ ಯಾರೊಬ್ಬರೂ ಪ್ರಧಾನಿಯಾಗಿಲ್ಲ. ಆದಾಗ್ಯೂ, ಗಾಂಧಿ ಕುಟುಂಬದ ವಿರುದ್ಧ ಮೋದಿ ಅವರು ಕುಟುಂಬ ರಾಜಕಾರಣದ ಆರೋಪ ಮಾಡುತ್ತಾರೆ' ಎಂದು ಟೀಕಿಸಿದ್ದಾರೆ.
'ಪ್ರಧಾನಿ ಮೋದಿ ಅವರು ವಿದೇಶಗಳನ್ನು ಸುತ್ತಿದ್ದಾರೆ, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ, ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರಕ್ಕೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.