ADVERTISEMENT

ಶೋಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಎಂಕೆ ಪತ್ರ; ತಕ್ಷಣ ಕ್ರಮಕ್ಕೆ ಆಯೋಗ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ ಆರೋಪ - ತಕ್ಷಣ ಕ್ರಮ: ಚುನಾವಣಾ ಆಯೋಗ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 15:23 IST
Last Updated 20 ಮಾರ್ಚ್ 2024, 15:23 IST
 ಶೋಭಾ ಕರಂದ್ಲಾಜೆ  
 ಶೋಭಾ ಕರಂದ್ಲಾಜೆ     

ಚೆನ್ನೈ/ನವದೆಹಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಡಿಎಂಕೆ ನೀಡಿರುವ ದೂರು ಆಧರಿಸಿ, ತಕ್ಷಣ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ಚುನಾವಣಾ ಆಯೋಗ ಬುಧವಾರ ನಿರ್ದೇಶನ ನೀಡಿದೆ.

ಈ ವಿಚಾರವಾಗಿ ಕೈಗೊಂಡಿರುವ ಕ್ರಮ ಕುರಿತು 48 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಆಯೋಗ ಸೂಚಿಸಿದೆ.

‘ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರಂದು ಸಂಭವಿಸಿದ ಕಚ್ಚಾಬಾಂಬ್ ಸ್ಫೋಟಕ್ಕೆ ತಮಿಳುನಾಡು ಮೂಲದ ವ್ಯಕ್ತಿಯೇ ಹೊಣೆ ಎಂಬುದಾಗಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ’ ಎಂದು ಆರೋಪಿಸಿರುವ ಡಿಎಂಕೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.  

ADVERTISEMENT

ಬೆಂಗಳೂರಿನಲ್ಲಿ ಮಂಗಳವಾರ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ, ‘ಕರ್ನಾಟಕದಲ್ಲಿ ಕಾನೂನು–ಸುವ್ಯವಸ್ಥೆ ಕುಸಿದಿದೆ. ತಮಿಳುನಾಡಿನಿಂದ ಬರುವ ಜನರು ಇಲ್ಲಿ ಬಾಂಬ್‌ಗಳನ್ನು ಇಡುತ್ತಾರೆ. ದೆಹಲಿಯಿಂದ ಬರುವ ಒಬ್ಬ ವ್ಯಕ್ತಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾನೆ. ಕೇರಳದಿಂದ ಬರುವ ವ್ಯಕ್ತಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್‌ ಎರಚುತ್ತಾನೆ’ ಎಂದು ಹೇಳಿದ್ದರು.

ಶೋಭಾ ಅವರ ಈ ಹೇಳಿಕೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಡಿಎಂಕೆ ಇತರ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು.

‘ಶೋಭಾ ಕರಂದ್ಲಾಜೆ ಅವರ ಹೇಳಿಕೆ ಅಜಾಗರೂಕತೆಯಿಂದ ಕೂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಇಂತಹ ವಿಭಜಕ ರಾಜಕಾರಣವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಸ್ಟಾಲಿನ್‌ ಆಗ್ರಹಿಸಿದ್ದರು. 

ಸ್ಟಾಲಿನ್‌ ಅವರ ಹೇಳಿಕೆ ಬೆನ್ನಲ್ಲೇ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌.ಭಾರತಿ, ‘ಕರ್ನಾಟಕ ಮತ್ತು ತಮಿಳುನಾಡು ಜನರ ಮಧ್ಯೆ ದ್ವೇಷ ಮತ್ತು ವೈರತ್ವ ಬಿತ್ತುವುದು ಹಾಗೂ ಆ ಮೂಲಕ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಸಚಿವೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ’ ಎಂದು ದೂರಿದ್ದಾರೆ.

‘ಸಚಿವೆಯ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಇದು ಸಮಾಜವನ್ನು ವಿಭಜಿಸುವ ಹೇಳಿಕೆಯಾಗಿದ್ದು, ಎರಡು ಸಮುದಾಯಗಳ ನಡುವಿನ ಸಂಬಂಧಕ್ಕೆ ಹಾನಿ ಉಂಟು ಮಾಡಿದೆ. ಸಾಮಾಜಿಕ ಜಾಲತಾಣಗಳು ಎರಡು ಸಮುದಾಯಗಳ ನಡುವಿನ ದ್ವೇಷ–ವೈರತ್ವ ಮತ್ತಷ್ಟೂ ಹೆಚ್ಚಾಗುವಂತೆ ಮಾಡಿವೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಕರಣ ದಾಖಲು: ‘ವಿವಿಧ ಗುಂಪುಗಳ ನಡುವೆ ವೈರತ್ವ ಸೃಷ್ಟಿಸಿದ’ ಆರೋಪದಡಿ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮದುರೈ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್‌ಡಿಎಫ್‌ ಯುಡಿಎಫ್‌ ಖಂಡನೆ

ತಿರುವನಂತಪುರ(ಪಿಟಿಐ): ರಾಜ್ಯದ ಜನರ ಕುರಿತಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಕೇರಳದ ಆಡಳಿತಾರೂಢ ಎಡಪಕ್ಷಗಳ ನೇತೃತ್ವದ ಒಕ್ಕೂಟ ಹಾಗೂ ವಿರೋಧ ಪಾಳಯ ಯುಡಿಎಫ್‌ ಬುಧವಾರ ತೀವ್ರವಾಗಿ ಖಂಡಿಸಿವೆ. ‘ಇಂತಹ ಹೇಳಿಕೆಗಳ ಮೂಲಕ ಕರ್ನಾಟಕದ ನಾಯಕಿ ರಾಜ್ಯದಲ್ಲಿನ ಧಾರ್ಮಿಕ ಸೌಹಾರ್ದವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಎರಡೂ ರಂಗಗಳು ಹೇಳಿವೆ.  ‘ಬಿಜೆಪಿ ನಾಯಕಿ ನೀಡಿರುವ ದ್ವೇಷದ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನಯ್ ವಿಶ್ವಮ್ ಆಗ್ರಹಿಸಿದ್ದಾರೆ.

ತಮಿಳುನಾಡಿನವರಿಂದ ಬಾಂಬ್‌: ಕ್ಷಮೆಯಾಚಿಸಿದ ಶೋಭಾ

‘ಯಾರೋ ತಮಿಳುನಾಡಿನಿಂದ ಬಂದು ದಿ ರಾಮೇಶ್ವರ ಕೆಫೆಯಲ್ಲಿ ಬಾಂಬ್‌ ಇರಿಸಿ ಹೋಗುತ್ತಾರೆ’ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ವಿವಿಧ ತಮಿಳು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ ಶೋಭಾ ಅವರು ಕ್ಷಮೆಯಾಚಿಸಿದ್ದಾರೆ.

ಮೊಬೈಲ್‌ ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ನಗರ್ತಪೇಟೆಯಲ್ಲಿ ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿಯಲ್ಲಿ ಮಾತನಾಡಿದ್ದ ಅವರು, ‘ವಿಧಾನಸೌಧ ಆವರಣಕ್ಕೆ ಯಾರೋ ಬಂದು ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗುತ್ತಾರೆ. ಮತ್ತೊಬ್ಬ ಹೆಣ್ಣು ಮಕ್ಕಳ ಮೇಲೆ ಆ್ಯಸಿಡ್‌ ದಾಳಿ ನಡೆಸುತ್ತಾನೆ. ಸ್ವಂತ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಸಿ.ಡಿ ಹಾಕಿದ್ದಕ್ಕೆ ಯುವಕನ ಮೇಲೆ ಇನ್ನೊಂದು ಗುಂಪು ಹಲ್ಲೆ ನಡೆಸುತ್ತದೆ. ಯಾರೋ ತಮಿಳುನಾಡಿನಿಂದ ಬಂದು ಬಾಂಬ್‌ ಇರಿಸಿ ಹೋಗುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಹೇಳಿದ್ದರು.

ಈ ಹೇಳಿಕೆಯು ತಮಿಳುನಾಡಿನವರನ್ನು ಅವಮಾನಿಸುವಂತಹದ್ದು ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ, ತಮಿಳುನಾಡಿನಲ್ಲಿ ದೂರು ದಾಖಲಾಗಿತ್ತು.

ತಮ್ಮ ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ, ಹೇಳಿಕೆ ಹಿಂಪಡೆಯುವುದಾಗಿ ಹೇಳಿದ ಶೋಭಾ, ‘ತಮಿಳು ಸಹೋದರ, ಸಹೋದರಿಯರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆ ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ತರಬೇತಿ ಪಡೆದವರಿಗೆ ಸೀಮಿತವಾಗಿದೆ. ರಾಮೇಶ್ವರ ಕೆಫೆ ಘಟನೆಗೂ ಆ ತರಬೇತಿಗೂ ಸಂಬಂಧ ಇದೆ. ಆದರೆ, ತಮಿಳುನಾಡಿನ ಜನರಲ್ಲಿ ನನ್ನ ಹೃದಯಾಂತರಾಳದಿಂದ ಕ್ಷಮೆ ಕೋರುತ್ತೇನೆ’ ಎಂದಿದ್ದಾರೆ.

‘24 ಗಂಟೆಯಲ್ಲಿ ವರದಿ’

‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮಿಳರ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿರುವ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದ್ದು, ಅವರಿಂದ ತನಿಖೆ ನಡೆಸಲು ನಮಗೆ ಆದೇಶ ಬಂದಿದೆ. 24 ಗಂಟೆಗಳೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಾಗುತ್ತದೆ’ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.