ADVERTISEMENT

‘ಮೋದಿ ಅಲೆ,ಅಭಿವೃದ್ಧಿ ರಾಜಕಾರಣಕ್ಕೆ ಗೆಲುವು’

ಎರಡನೇ ಬಾರಿಗೆ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 13:55 IST
Last Updated 23 ಮೇ 2019, 13:55 IST
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಗೊಂಡ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಗೊಂಡ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು   

ಕೊಪ್ಪಳ: ‘ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಕಾರ್ಯ ಮತ್ತುಈ ದೇಶ ಕಂಡ ಅಪ್ರತಿಮ ನಾಯಕ ಪ್ರಧಾನಿ ನರೇಂದ್ರ ಮೋದಿಅವರ ಅಲೆಯಿಂದ ನಮ್ಮ ಗೆಲುವು ಸಾಧ್ಯವಾಯಿತು’ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.

ಗುರುವಾರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರ ಬಂದು ಸಂತಸ ಹಂಚಿಕೊಂಡರು.

‘ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಿಗಳಿಗೆ ಈ ಚುನಾವಣೆ ತಕ್ಕ ಉತ್ತರ ನೀಡಿದೆ. ವಿರೋಧಿಗಳ ಯಾವುದೇ ಕುತಂತ್ರಕ್ಕೆ ಮಣಿಯದೇ ಪ್ರಜ್ಞಾವಂತರ ಮತದಾರರು ಆಶೀರ್ವಾದ ಮಾಡಿದ್ದರಿಂದ ಮತ್ತೊಮ್ಮೆ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ಹೇಳಿದರು.

ADVERTISEMENT

‘ಈಗಾಗಲೇ ಕ್ಷೇತ್ರದಲ್ಲಿ ರಸ್ತೆ, ಹೆದ್ದಾರಿ, ರೈಲ್ವೆ ಯೋಜನೆ ವೇಗದಿಂದ ನಡೆಯುತ್ತಿವೆ. ಅವುಗಳನ್ನು ಪೂರ್ಣಗೊಳಿಸಲಾಗುವುದು. ಈ ಬಾರಿ ನನ್ನ ಚುನಾವಣೆ ಆದ್ಯತೆ ನೀರಾವರಿ ಕ್ಷೇತ್ರ ಆಗಿತ್ತು. ಜಿಲ್ಲೆಯ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಎನ್‌ಡಿಎ ಸರ್ಕಾರ ಪ್ರಣಾಳಿಕೆಯಲ್ಲಿಯೇ ಭರವಸೆ ನೀಡಿದೆ. ಅದರಂತೆ ಕ್ಷೇತ್ರದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವುದೇ ನಮ್ಮ ಗುರಿಯಾಗಿದೆ’ ಎಂದು ಹೇಳಿದರು.

‘ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನು ಬೆಂಬಲಿಸಿದ್ದಾರೆ. ದೇಶದಾದ್ಯಂತ ಮೋದಿ ಅವರ ಪ್ರಾಮಾಣಿಕ, ಕಳಕಳಿಯ ವ್ಯಕ್ತಿತ್ವಕ್ಕೆ ಜನ ಮಾರುಹೋಗಿದ್ದಾರೆ. ಈ ಗೆಲುವು ಮೋದಿ ಅವರಿಂದಾಗಿಯೇ ನಮಗೆ ದೊರೆತಿದೆ’ ಎಂದು ಹೇಳಿದರು.

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.