ADVERTISEMENT

‘ಚಿಲ್ಲರೆ ರಾಜಕೀಯ ಇಲ್ಲ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು: ‘ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಸಣ್ಣತನದ ರಾಜಕೀಯ ಮಾಡಲಾರೆ. ಈ ಹುದ್ದೆಯ ಗೌರವಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ನಡೆದು­ಕೊಳ್ಳುತ್ತೇನೆ’ ಎಂದು ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್‌ ಶಾಸಕ ಬಿ.ಶ್ರೀರಾಮುಲು ಅವರ ರಾಜೀನಾಮೆ ಪತ್ರ ಸ್ವೀಕರಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ತಿಮ್ಮಪ್ಪ, ‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿ­ದ್ದಾರೆ. ಆದರೆ, ರಾಜಕೀಯ ಬೆಳವಣಿಗೆಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದರು.

ಈಗ ತಾವು ರಾಜಕೀಯದ ನಂಟು ಇಲ್ಲದ ಹುದ್ದೆಯಲ್ಲಿರುವುದರಿಂದ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯಲ್ಲೂ ಭಾಗಿ­ಯಾಗಿಲ್ಲ. ವಿಧಾನಸಭೆಯ ಅಧ್ಯಕ್ಷರ ಹುದ್ದೆ ಪಕ್ಷಾತೀತವಾದುದು. ಆ ಗೌರವಕ್ಕೆ ಚ್ಯುತಿ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ತಮ್ಮ ಮೇಲೆ ಕಾಂಗ್ರೆಸ್‌ ಪಕ್ಷ ಒತ್ತಡ ಹೇರಿರುವ ಕುರಿತು ಪ್ರಶ್ನಿಸಿದಾಗ, ‘ಚುನಾವಣೆ­ಯಲ್ಲಿ ಸ್ಪರ್ಧಿಸಲು ನನಗೆ ಇಷ್ಟವಿಲ್ಲ. ಇನ್ನು ಚುನಾವಣೆ ಕಡೆ ತಲೆ ಹಾಕಲಾರೆ’ ಎಂದು ಉತ್ತರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರಿಂದ ಒತ್ತಡ ಬಂದಿರಲಿಲ್ಲವೇ ಎಂದು ಮತ್ತೆ ಪ್ರಶ್ನಿಸಿದಾಗ, ‘ಕೆಪಿಸಿಸಿ ಅಧ್ಯಕ್ಷ­ರಿಂದ ಯಾವುದೇ ಕೋರಿಕೆ ಬಂದಿರಲಿಲ್ಲ. ಚುನಾವಣೆಗೆ ಸ್ಪರ್ಧಿಸುವಂತೆ ಮುಖ್ಯಮಂತ್ರಿಯವರು ಮಾತ್ರ ಮನವಿ ಮಾಡಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.