ADVERTISEMENT

ಬಿಜೆಪಿ ಒಳ್ಳೆಯ ವಿರೋಧ ಪಕ್ಷವಾಗಲಿದೆ: ಸಚಿವೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 16 ಮೇ 2023, 8:04 IST
Last Updated 16 ಮೇ 2023, 8:04 IST
ಶೋಭಾ ಕರಂದ್ಲಾಜೆ –ಪ್ರಜಾವಾಣಿ ಚಿತ್ರ/ರಂಜು ಪಿ
ಶೋಭಾ ಕರಂದ್ಲಾಜೆ –ಪ್ರಜಾವಾಣಿ ಚಿತ್ರ/ರಂಜು ಪಿ   

ಮೈಸೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು– ಗೆಲುವು ಸಾಮಾನ್ಯ. ಸೋಲನ್ನು ಸ್ವೀಕರಿಸಿದ್ದೇವೆ. ಒಳ್ಳೆಯ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಶೇ 95ರಷ್ಟು ಹಳ್ಳಿಗಳನ್ನು ತಲುಪಿವೆ. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡಿದ್ದರು’ ಎಂದರು.

‘ಗೆಲುವು ಸಾಧಿಸಿದವರಿಗೆ ಶುಭವಾಗಲಿ. ಕೊಟ್ಟಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ಸಿಗಲಿ’ ಎಂದು ಹೇಳಿದ ಅವರು, ‘ಮುಖ್ಯಮಂತ್ರಿ ಆಯ್ಕೆ, ಆ ಪಕ್ಷದ ಆಂತರಿಕ ವಿಚಾರ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ದೇಶದಾದ್ಯಂತ 71,206 ಮಂದಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ನೀಡಲಾಗುತ್ತಿದೆ. ಬರುವ ದಿನಗಳಲ್ಲೂ ಅರ್ಹ ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗ ನೇಮಕ ಪ್ರಕ್ರಿಯೆಗಳು ನಡೆದಿರಲಿಲ್ಲ. ಹಿಂದಿನ ಸರ್ಕಾರಗಳೂ ಯುವ ಸಮುದಾಯದ ಬಗ್ಗೆ ಕಾಳಜಿ ಹೊಂದಿರಲಿಲ್ಲ. ಇದೀಗ ಕೇಂದ್ರವು ರಾಜ್ಯ ಸರ್ಕಾರಗಳಿಗೂ ಅಗತ್ಯ ಉದ್ಯೋಗ ಭರ್ತಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದೆ’ ಎಂದರು.

‘ಎಲ್ಲ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆಯಿಂದ ಕೆಲಸಗಳು ವೇಗವಾಗಿ ನಡೆಯುತ್ತಿರಲಿಲ್ಲ. ಉದ್ಯೋಗ ಮೇಳವನ್ನು ಆಯೋಜಿಸದ್ದರಿಂದ ಅರ್ಹರಿಗೆ ಉದ್ಯೋಗ ಸಿಗುತ್ತಿರಲಿಲ್ಲ. ಇದೀಗ ಪಾರದರ್ಶಕ ವ್ಯವಸ್ಥೆಯಡಿ ನೇಮಕಾತಿ ನಡೆಯುತ್ತಿದೆ. ಯುವ ಸಮುದಾಯಕ್ಕೆ ಉತ್ಸಾಹ ತುಂಬಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.