ADVERTISEMENT

ಲೋಕಸಭೆ ಚುನಾವಣೆ: ಅಭ್ಯರ್ಥಿಗಳಿಗೆ ಗುಳೆ ಹೋದವರದ್ದೇ ಚಿಂತೆ

ಕೆಲಸ ಹುಡುಕಿಕೊಂಡು ಹೋದವರ ಮತ ಹಾಕಿಸುವ ಸವಾಲು

ಬಸವರಾಜ ಹವಾಲ್ದಾರ
Published 16 ಏಪ್ರಿಲ್ 2024, 4:38 IST
Last Updated 16 ಏಪ್ರಿಲ್ 2024, 4:38 IST
ಉಡುಪಿ ಬಸ್‌ ನಿಲ್ದಾಣದಲ್ಲಿ ಬೇರೆ, ಬೇರೆ ಕಡೆಗೆ ಹೋಗಲು ಗಂಟು, ಮೂಟೆಗಳೊಂದಿಗೆ ಕಾಯುತ್ತಿರುವ ಬಾಗಲಕೋಟೆಯ ಜಿಲ್ಲೆಯ ಜನ
ಉಡುಪಿ ಬಸ್‌ ನಿಲ್ದಾಣದಲ್ಲಿ ಬೇರೆ, ಬೇರೆ ಕಡೆಗೆ ಹೋಗಲು ಗಂಟು, ಮೂಟೆಗಳೊಂದಿಗೆ ಕಾಯುತ್ತಿರುವ ಬಾಗಲಕೋಟೆಯ ಜಿಲ್ಲೆಯ ಜನ   

ಬಾಗಲಕೋಟೆ: ಬರ ಇರುವ ಕಾರಣ ಕೆಲಸ ಹುಡುಕಿಕೊಂಡು ಬೇರೆ ಜಿಲ್ಲೆ, ರಾಜ್ಯಗಳಿಗೆ ಗುಳೆ ಹೋಗುವವರ ಸಂಖ್ಯೆ ಹೆಚ್ಚಿದೆ. ಗ್ರಾಮಗಳಲ್ಲಿ ವಾಸಿಸುವವರ ಸಂಖ್ಯೆ ಕಡಿಮೆಯಾಗಿದೆ. ಲೋಕಸಭಾ ಚುನಾವಣೆ ಇರುವುದರಿಂದ ಅಭ್ಯರ್ಥಿಗಳಿಗೆ ಗುಳೆ ಹೋದವರ ಮತಗಳದ್ದೇ ಚಿಂತೆಯಾಗಿದೆ.

ಜಿಲ್ಲೆಯ ಹುನಗುಂದ, ಬಾದಾಮಿ, ಬಾಗಲಕೋಟೆ, ಬೀಳಗಿ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಕೂಲಿ ಅರಸಿಕೊಂಡು ಮಂಗಳೂರು, ಉಡುಪಿ, ಕುಂದಾಪುರ, ಬೆಂಗಳೂರು ಅಲ್ಲದೇ ಗೋವಾ, ಮಹಾರಾಷ್ಟ್ರಕ್ಕೆ ಹೋಗುತ್ತಾರೆ. 

ಜಿಲ್ಲಾ ಕೇಂದ್ರ ಬಾಗಲಕೋಟೆ, ಹುನಗುಂದ, ಇಳಕಲ್‌, ಕೂಡಲಸಂಗಮ, ಗುಡೂರು, ಗುಳೇದಗುಡ್ಡ, ಅಮೀನಗಡ, ಬಾದಾಮಿ ಸೇರಿ ಪಕ್ಕದ ವಿಜಯಪುರ ಜಿಲ್ಲೆಯ ಬಸ್‌ಗಳು ನಿತ್ಯ ಮಂಗಳೂರು ಮತ್ತು ಗೋವಾ ರಾಜ್ಯಕ್ಕೆ ಹೋಗುತ್ತವೆ. ಜಿಲ್ಲೆಯಿಂದ ನಿತ್ಯ 35ಕ್ಕೂ ಹೆಚ್ಚು ಸರ್ಕಾರಿ ಮತ್ತು 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಮಂಗಳೂರಿಗೆ ಹೋಗುತ್ತವೆ.

ADVERTISEMENT

ಹುನಗುಂದ, ಇಳಕಲ್‌, ಬಾದಾಮಿ, ಗುಳೇದಗುಡ್ಡ ತಾಲ್ಲೂಕಿನ ಬಹುಭಾಗ, ಬಾಗಲಕೋಟೆ ತಾಲ್ಲೂಕಿನ ಅರ್ಧಕ್ಕಿಂತ ಹೆಚ್ಚು ಭಾಗದ ಕೃಷಿ  ಮಳೆಯನ್ನೇ ಅವಲಂಬಿಸಿದೆ. ಮಳೆ ಬಾರದಿರುವುದರಿಂದ ಕೆಲಸಕ್ಕಾಗಿ ನಿತ್ಯ ಗಂಟು ಮೂಟೆ ಸಮೇತ ಗುಳೆ ಹೋಗುತ್ತಿದ್ದಾರೆ. ಗ್ರಾಮಗಳ ಮನೆಗಳ ಬಾಗಿಲುಗಳಲ್ಲಿ ಬೀಗಗಳನ್ನೇ ಕಾಣಬಹುದಾಗಿದೆ. ಕೆಲವೆಡೆ ವಯೋವೃದ್ಧರು ಮಾತ್ರ ಮನೆಯಲ್ಲಿದ್ದಾರೆ.

ಗುಳೆ ಹೋದವರ ಮನೆಗಳಿಗೆ ಹೋಗಿ ಮತದಾನಕ್ಕೆ ಕರೆಯಿಸಲು ಕೋರುತ್ತೇವೆ. ಜೊತೆಗೆ ಮೊಬೈಲ್‌ ನಂಬರ್ ತೆಗೆದುಕೊಂಡು ನಾವೂ ಮನವಿ ಮಾಡಿಕೊಳ್ಳುತ್ತೇವೆ.
ಶಾಂತಗೌಡ ಪಾಟೀಲ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

‘ಬಿತ್ತನೆ, ಕೊಯ್ಲು ಕಾಲದಾಗ ಬಿಟ್ಟರ ಬ್ಯಾರೆ ಟೈಮಿನ್ಯಾಗ ಕೆಲಸ ಇರಾದಿಲ್ಲ. ಹಂಗಾಗಿ, ಬಹಳ ವರ್ಸದಿಂದ ದುಡ್ಯಾಕ ಬ್ಯಾರೆ ಕಡಿಗಿ ಹೊಕ್ಕಾರ. ಮಳಿ ಬಾರದ್ದರಿಂದ ಹೋದವರ ಸಂಖಿ ಹೆಚ್ಚಾಗ್ಯದ’ ಎನ್ನುತ್ತಾರೆ ಗುಡೂರಿನ ಸಂಗಪ್ಪ ಕಟ್ಟಿ.

‘ನರೇಗಾದಡಿ ಕೆಲಸ ಸಿಕ್ಕರೂ 100 ದಿನ ಮಾತ್ರ ಕೊಡತಾರ. ಉಳಿದ ದಿನಗಳು ಏನು ಮಾಡಬೇಕ? ಜೊತೆಗಿ ಬ್ಯಾರೆ ಕಡೆ ಕೂಲಿನೂ ಜಾಸ್ತಿ ಸಿಗತಾದ. ಅದಕ್ಕ ಹೋಗೊದು ಅನಿವಾರ್ಯ ಆಗ್ಯದ’ ಎನ್ನುತ್ತಾರೆ ಅವರು.

ಕಟ್ಟಡ ಕಾಮಗಾರಿ: ಮಂಗಳೂರು, ಉಡುಪಿ, ಪಣಜಿ, ಬೆಂಗಳೂರಿಗೆ ಕಟ್ಟಡ ಕಾಮಗಾರಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ದಿನಕ್ಕೆ ₹500 ರಿಂದ ₹800ವರೆಗೆ ಕೂಲಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.