ಬೆಂಗಳೂರು: ‘ಎಚ್.ಡಿ. ಕುಮಾರಸ್ವಾಮಿ ಅವರು ವಿಚಲಿತರಾಗಿದ್ದು, ಅವರ ಹೇಳಿಕೆ ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ಈ ವಿಚಾರದಲ್ಲಿ ಚುನಾವಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಆಗ್ರಹಿಸಿದರು.
ರಾಜರಾಜೇಶ್ವರಿ ನಗರ ವಿಧಾಸಭಾ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಪ್ರತಿ ಹಂತದಲ್ಲೂ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಹೇಳಿಕೆ ನೀಡಿದ್ದಾರೆ’ ಎಂದರು.
‘ಮಹಿಳೆಯರು ಸ್ವಾಭಿಮಾನದ ಬದುಕು ಬದುಕಲು ನಾವು ಈ ಯೋಜನೆ ಕೊಟ್ಟಿದ್ದೇವೆ. ಮಹಿಳಾ ಸಬಲೀಕರಣದ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ಅದಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಎಲ್ಲರೂ ತಲೆತಗ್ಗಿಸುವ ವಿಚಾರ’ ಎಂದರು.
‘ಬೇರೆ ರಾಜ್ಯಗಳಿಗೆ ಡಿ.ಕೆ ಸಹೋದರರು ಹಣ ರವಾನಿಸುತ್ತಿದ್ದಾರೆ’ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡುತ್ತಿರುವ ಬಗ್ಗೆ ಪ್ರಧಾನಿ ಮೊದಲು ಮಾತನಾಡಲಿ. ಬೇರೆ ರಾಜ್ಯಗಳಿಗೆ ಯಾಕೆ ಹೆಚ್ಚು ಹಣ ನೀಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಅವರ ಕೊಡುಗೆ ಏನು. ನೀರಾವರಿ ವಿಚಾರದಲ್ಲಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ. ಹತ್ತು ವರ್ಷಗಳಲ್ಲಿ ಬೆಂಗಳೂರಿಗೆ ಕೊಟ್ಟಿರುವ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಿಗಿಂತ ಹೆಚ್ಚಿನ ಉತ್ಸಾಹ ಹಾಗೂ ಪ್ರೋತ್ಸಾಹ ಕಾಣಿಸುತ್ತಿದೆ. ನಮ್ಮ ವಿರುದ್ಧ ನಡೆಯುತ್ತಿರುವ ಬೇರೆ ರೀತಿಯ ಪ್ರಚಾರಕ್ಕೆ ವಿರುದ್ಧವಾಗಿ ಜನ ನನಗೆ ಬೆಂಬಲ ನೀಡುತ್ತಿದ್ದಾರೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.