ADVERTISEMENT

ಕಲಬುರಗಿ: ಬಿಜೆಪಿಗೆ ದೊಡ್ಡಪ್ಪಗೌಡ ಪಾಟೀಲ ರಾಜೀನಾಮೆ, ಜೆಡಿಎಸ್‌ನತ್ತ ಚಿತ್ತ?

ಧರ್ಮಸಿಂಗ್ ಅವರನ್ನು 70 ಮತಗಳಿಂದ ಸೋಲಿಸಿದ್ದ ದೊಡ್ಡಪ್ಪಗೌಡ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 12:25 IST
Last Updated 12 ಏಪ್ರಿಲ್ 2023, 12:25 IST
ದೊಡ್ಡಪ್ಪಗೌಡ ಪಾಟೀಲ ನರಿಬೋಳ
ದೊಡ್ಡಪ್ಪಗೌಡ ಪಾಟೀಲ ನರಿಬೋಳ   

ಕಲಬುರಗಿ: ಜೇವರ್ಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬುಧವಾರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ತಮ್ಮ ಸಾವಿರಾರು ಬೆಂಬಲಿಗರು, ಅಭಿಮಾನಿಗಳನ್ನು ಕರೆದು ಸಭೆ ನಡೆಸಿದರು. ಬಿಜೆಪಿಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವೂ ಪ್ರಕಟಿಸಿದರು.

ಬಳಿಕ ಮಾತನಾಡಿದ ಅವರು, ‘ನಾನು ಯಾರಿಗೂ ಮೋಸ ಮಾಡಿಲ್ಲ. ಕಳ್ಳತನ ಮತ್ತು ಲೂಟಿಯೂ ಮಾಡಿಲ್ಲ. ನಿತ್ಯ ಕ್ಷೇತ್ರದ ಜನರ ಕೆಲಸ ಮಾಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಕೆಲವರು ನನಗೆ ಸಿಗಬೇಕಾದ ಟಿಕೆಟ್ ತಪ್ಪಿಸಿದ್ದಾರೆ. ಈ ಕಾರಣಕ್ಕಾಗಿಯೇ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದರು.

‘ಬೇರೆ ಪಕ್ಷ ಸೇರ್ಪಡೆ ಕುರಿತು ಇನ್ನು ನಿರ್ಧಾರ ಕೈಗೊಂಡಿಲ್ಲ. ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ 2–3 ದಿನಗಳಲ್ಲಿ ಈ ಕುರಿತು ತಿಳಿಸಲಾಗುವುದು’ ಎಂದು ಹೇಳಿದರು.

ದೊಡ್ಡಪ್ಪಗೌಡ ಅವರು ತಾಯಿ ಮಲ್ಲಮ್ಮಗೌಡತಿ ಶಿವಲಿಂಗಪ್ಪಗೌಡ ನರಿಬೋಳ ಮಾತನಾಡಿ, ‘ನನ್ನ ಮಗನನ್ನು ನಿಮ್ಮ ಊಡಿಯಲ್ಲಿ ಹಾಕಿದ್ದೇನೆ. ಬೆಳೆಸುವ ಜವಾಬ್ದಾರಿ ತಾಲ್ಲೂಕಿನ ಜನರ ಮೇಲೆ ಇದೆ. ನಮ್ಮ ಕುಟುಂಬಕ್ಕೆ ಮೋಸ ಮಾಡಿದವರಿಗೆ ನೀವೇ ಉತ್ತರ ಕೊಡಬೇಕು’ ಎಂದರು.

ಜೆಡಿಎಸ್‌ನತ್ತ ಚಿತ್ತ?
ಜೇವರ್ಗಿಯಲ್ಲಿ ಜೆಡಿಎಸ್‌ನಿಂದ ಮೂರು ಬಾರಿ ಸ್ಪರ್ಧಿಸಿದ್ದ ಕೇದಾರಲಿಂಗಯ್ಯ ಹಿರೇಮಠ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಜೆಡಿಎಸ್‌ ಕೂಡ ಮೊದಲ ಬಾರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮ ಗೊಳಿಸಿಲ್ಲ. ಹೀಗಾಗಿ, ದೊಡ್ಡಪ್ಪಗೌಡ ಅವರು ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರು, ತಮ್ಮ ನಿಲುವು ಏನು ಎಂಬುದು ಸ್ಪಷ್ಟಪಡಿಸಿಲ್ಲ.

ಧರ್ಮಸಿಂಗ್ ಸೋಲಿಸಿದ್ದ ದೊಡ್ಡಪ್ಪಗೌಡ
2008ರ ವಿಧನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರನ್ನು ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು 70 ಮತಗಳ ಅಂತರದಿಂದ ಸೋಲಿಸಿದ್ದರು. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ.ಅಜಯ ಸಿಂಗ್ ವಿರುದ್ಧ ಪರಾಭವಗೊಂಡರು.

ಈ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ, ಹೈಕಮಾಂಡ್ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಅವರಿಗೆ ಟಿಕೆಟ್ ನೀಡಿದೆ.

ಸಭೆಯಲ್ಲಿ ಮುಖಂಡರಾದ ರಮೇಶ ಬಾಬು ವಕೀಲ, ದಂಡಪ್ಪ ಸಾಹು ಕರಳಗೇರಿ, ಸುರೇಶ ಸುಂಬಡ, ಸಿದ್ದಣ್ಣ ಹೂಗಾರ, ಸಾಯಬಣ್ಣ ದೊಡ್ಕನಿ, ಶಿವಾನಂದ ಮಾಕಾ, ನಾನಾಗೌಡ ಅಲ್ಲಾಪುರ, ದೇವಿಂದ್ರಪ್ಪಗೌಡ, ಪುಂಡಲಿಕ ಗಾಯಕವಾಡ, ಚಂದ್ರಕಾಂತ ಕುಸ್ತಿ ಇದ್ದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.