ADVERTISEMENT

ಸಂದರ್ಶನ |ಶಾಸಕನ ಕೆಲಸವನ್ನು ಮಾಡಿದ್ದೇನೆ: ಬಿ.‍ಪುಟ್ಟಸ್ವಾಮಿ

ಬಿ.ಪುಟ್ಟಸ್ವಾಮಿ (ಜೆಡಿಎಸ್ ಅಭ್ಯರ್ಥಿ)

​ಪ್ರಜಾವಾಣಿ ವಾರ್ತೆ
Published 4 ಮೇ 2023, 6:52 IST
Last Updated 4 ಮೇ 2023, 6:52 IST
ಬಿ.‍ಪುಟ್ಟಸ್ವಾಮಿ
ಬಿ.‍ಪುಟ್ಟಸ್ವಾಮಿ   

l ಪೊಲೀಸ್ ಆಗಿದ್ದವರು ರಾಜಕಾರಣಿ ಆಗಿದ್ದೀರಿ ಏಕೆ?

ಬಾಲ್ಯದಿಂದಲೂ ನನಗೆ ಸಾರ್ವಜನಿಕರಿಗೆ ಹಾಗೂ ಬಡವರಿಗೆ ಸಹಾಯ ಮಾಡಬೇಕು ಎಂಬ ಆಸೆ. ಪೊಲೀಸ್ ಇಲಾಖೆಯಲ್ಲಿ ಮುಕ್ತವಾಗಿ ಜನಸೇವೆ ಮಾಡಲು ಅವಕಾಶ ಇರುವುದಿಲ್ಲ. ಒಂದು ಚೌಕಟ್ಟಿನಡಿಯಲ್ಲಿ ಕೆಲಸ ಮಾಡಬೇಕು. ರಾಜಕೀಯದಲ್ಲಿ ಜನಸೇವೆ ಮಾಡಲು ಹೆಚ್ಚು ಅವಕಾಶ ಇದೆ. ನನ್ನ ಕೆಲವು ಅಭಿಮಾನಿಗಳು ಕೂಡ ‘ರಾಜಕೀಯಕ್ಕೆ ಬನ್ನಿ, ನಿಮ್ಮ ಅವಶ್ಯಕತೆ ಇದೆ’ ಒತ್ತಾಯ ಮಾಡಿದ್ದರು. ಹಾಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಬೆಂಬಲಿಗರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇದ್ದಾಗಲೂ ಜನಸೇವೆ ಮಾಡಿದ್ದೇನೆ.

l ಪ್ರಚಾರ ಹೇಗೆ ಸಾಗುತ್ತಿದೆ? ಬಿಜೆಪಿ–ಕಾಂಗ್ರೆಸ್ ಅಬ್ಬರದಲ್ಲಿ ನೀವು ಮಂಕಾಗಿದ್ದೀರಾ?

ADVERTISEMENT

ಜೆಡಿಎಸ್ ಕಾರ್ಯಕರ್ತರು ಹಾಗೂ ನನ್ನ ಅಭಿಮಾನಿಗಳು ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ನಾನೂ ಸುತ್ತಾಡುತ್ತಿದ್ದೇನೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮತದಾರರು ‘ಕ್ಷೇತ್ರಕ್ಕೆ ಹೊಸ ಮುಖ ಅವಶ್ಯಕತೆ ಇದೆ. ನೀವು ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಸೇವೆ ನಮಗೆ ಬೇಕು’ ಎಂಬ ಪ್ರೋತ್ಸಾಹದ ಮಾತುಗಳನ್ನು ಆಡುತ್ತಿದ್ದಾರೆ. ಜನರು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಬ್ಬರ ನನಗೇನೂ ಕಾಣುತ್ತಿಲ್ಲ. ಅಬ್ಬರವಿದ್ದರೆ ಅದು ಜೆಡಿಎಸ್‌ನದ್ದು ಮಾತ್ರ. 

l ಜನರು ಹೇಗೆ ನಿಮ್ಮನ್ನು ಸ್ವೀಕಾರ ಮಾಡುತ್ತಿದ್ದಾರೆ?

ಹೋದ ಕಡೆಯಲ್ಲ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಪ್ರತಿಯೊಂದು ಸಮುದಾಯದ ಮುಖಂಡರು ಹಾಗೂ ತಾಯಂದಿರು ನಿಮ್ಮಂತಹ ಅಭ್ಯರ್ಥಿ ಬೇಕು ಎಂದು ಹೇಳುತ್ತಿದ್ದಾರೆ. ಜನರು ‘ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ನ್ಯಾಯ ದೊರಕಿಸಿದ್ದೀರಿ. ಹಾಗಾಗಿ ನಮ್ಮ ಕ್ಷೇತ್ರಕ್ಕೆ ನಿಮ್ಮ ಅವಶ್ಯಕತೆ ಇದೆ’ ಎಂದು ಹೋದ ಕಡೆಯಲ್ಲ ಹೇಳುತ್ತಿದ್ದಾರೆ. ಅದರಲ್ಲೂ ಮಹಿಳೆಯರು ‘ನೀವು ಗೆದ್ದೇ ಗೆಲ್ಲುತ್ತೀರಿ... ಧೈರ್ಯದಿಂದ ಹೋಗಿ ಬನ್ನಿ’ ಎಂದು ಆಶೀರ್ವಾದ ಮಾಡುತ್ತಿದ್ದಾರೆ. ಇದಕ್ಕಿಂತ ಭಾಗ್ಯ ನನಗೆ ಇನ್ಯಾವುದೂ ಇಲ್ಲ. ಕೊಳ್ಳೇಗಾಲದಲ್ಲಿ ಜೆಡಿಎಸ್‌ ಬಾವುಟ ಹಾರುವುದು ಖಚಿತ.

l ನಿಮ್ಮ ಎದುರಾಳಿ ಯಾರು?

ವಿರೋಧ ಪಕ್ಷಗಳ ಅಭ್ಯರ್ಥಿಗಳೇ ನನ್ನ ಎದುರಾಳಿಗಳು. ವ್ಯಕ್ತಿಗಳ ವಿರುದ್ಧ ನಾನು ಎಂದಿಗೂ ಟೀಕೆ, ಇಲ್ಲಸಲ್ಲದ ಆರೋಪಗಳನ್ನು ಮಾಡಲು ನಾನು ಹೋಗುವುದಿಲ್ಲ. ಚುನಾವಣೆಯಲ್ಲಷ್ಟೇ ಅವರು ನನ್ನ ಎದುರಾಳಿಗಳು. ನಿಜ ಬದುಕಿನಲ್ಲಿ ಎದುರಾಳಿ ಎಂದು ನಾನು ಯಾರನ್ನೂ ಪರಿಗಣಿಸುವುದಿಲ್ಲ. 

l ಓಲೆ ಮಹದೇವ ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿರುವುದು ಪರಿಣಾಮ ಬೀರುವುದೇ?

ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರದು.

l ಕ್ಷೇತ್ರದ ಜನರು ನಿಮಗೆ ಮತ ಏಕೆ ಹಾಕಬೇಕು?‌

ನಾನು ಈ ಕ್ಷೇತ್ರದಲ್ಲಿ ಹುಟ್ಟಿ ಬೆಳೆದವನು. ಈ ಕ್ಷೇತ್ರದಲ್ಲೇ ಕರ್ತವ್ಯ ಮಾಡಿದವನು. ಪೊಲೀಸ್ ಇಲಾಖೆಯಲ್ಲಿ ಇದ್ದು ಬಿ.ಪುಟ್ಟಸ್ವಾಮಿ ಅಭಿಮಾನ ಬಳಗವನ್ನು ಕಟ್ಟಿ ಅದರ ಅಡಿಯಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಅನೇಕ ಸಹಾಯ ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ಕ್ಷೇತ್ರದಾದ್ಯಂತ ಉತ್ತಮ ಹೆಸರನ್ನು ಪಡೆದುಕೊಂಡಿದ್ದೇನೆ. ನಮ್ಮ ಟ್ರಸ್ಟ್ ಮೂಲಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಅನೇಕ ಮಂದಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಶಾಸಕರಾಗಿ ಮಾಡುವ ಕೆಲಸಗಳನ್ನು ಶಾಸಕನಾಗದೆ ಮಾಡಿದ್ದೇನೆ. ಇದಕ್ಕೆಲ್ಲ ಕಾರಣ ನನ್ನ ಟ್ರಸ್ಟಿನ ಸದಸ್ಯರು ಹಾಗೂ ನನ್ನ ಅಭಿಮಾನಿಗಳು. ಒಂದು ವೇಳೆ ಶಾಸಕನಾಗಿ ಆಯ್ಕೆ ಮಾಡಿದರೆ ಕ್ಷೇತ್ರದ ಜನರಿಗೆ ಇನ್ನಷ್ಟು ಕೆಲಸ ಮಾಡುವ ಅವಕಾಶ ಸಿಗುತ್ತದೆ. ನನಗೆ ಇನ್ನೂ ಚಿಕ್ಕ ವಯಸ್ಸು ಆಗಿರುವುದರಿಂದ ಉತ್ಸಾಹದಿಂದ ಕೆಲಸ ಮಾಡುವೆ. ಕ್ಷೇತ್ರದ ಜನರು ನನ್ನನ್ನು ಈ ಬಾರಿ ಗೆಲ್ಲಿಸುವ ವಿಶ್ವಾಸ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.