ADVERTISEMENT

ಶಿವಮೊಗ್ಗ | ಜ್ಞಾನೇಂದ್ರ, ಹಾಲಪ್ಪ, ಕುಮಾರ್, ಅಶೋಕ ನಾಯ್ಕಗೆ ಮತ್ತೆ ಟಿಕೆಟ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 18:21 IST
Last Updated 11 ಏಪ್ರಿಲ್ 2023, 18:21 IST
   

ಶಿವಮೊಗ್ಗ: ಜಿಲ್ಲೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ಅಂತಿಮಗೊಳಿಸಿರುವ ಬಿಜೆಪಿ ಹೈಕಮಾಂಡ್, ವರುಣಾದಿಂದ ಅವರ ಸ್ಪರ್ಧೆ, ವಂಶಪಾರಂಪರ್ಯ ರಾಜಕಾರಣ ಸೇರಿದಂತೆ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದೆ.

ತೀರ್ಥಹಳ್ಳಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ, ಸೊರಬ ಹಾಗೂ ಶಿವಮೊಗ್ಗ ಗ್ರಾಮೀಣದಿಂದ ಹಾಲಿ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ ನಾಯ್ಕ ಹಾಗೂ ಭದ್ರಾವತಿಯಲ್ಲಿ ಹೊಸ ಮುಖ ಮಂಗೋಟಿ ರುದ್ರೇಶ್ ಅವರಿಗೆ ಮಣೆ ಹಾಕಿದೆ. ಅಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್‌.ಕುಮಾರ್‌ ಹಾಗೂ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರನ್ನು ನಿರಾಶೆಗೊಳಿಸಿದೆ. ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಮಂಗೋಟಿ ಗ್ರಾಮದ ರುದ್ರೇಶ್ ಮೊದಲು ಜೆಡಿಎಸ್‌ನಲ್ಲಿದ್ದರು. ಈಗ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆರು ತಿಂಗಳ ಹಿಂದೆಯೇ ಶಿಕಾರಿಪುರ ಕ್ಷೇತ್ರದಿಂದ ಪುತ್ರನ ಹೆಸರು ಅಂತಿಮಗೊಳಿಸಿದ್ದರು. ಆಗಿನಿಂದಲೂ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು, ಈಗಾಗಲೇ ಎರಡು ಸುತ್ತಿನ ಪ್ರಚಾರ ಸಭೆಗಳನ್ನು ನಡೆಸಿದ್ದಾರೆ.

ADVERTISEMENT

ಸೊರಬದಲ್ಲಿ ನಮೋ ವೇದಿಕೆ ಹಾಗೂ ಸಾಗರದಲ್ಲಿ ಪಕ್ಷದ ಹಿರಿಯರ ವೇದಿಕೆಯ ಪ್ರಬಲ ವಿರೋಧದ ನಡುವೆಯೂ ಕುಮಾರ್ ಬಂಗಾರಪ್ಪ ಹಾಗೂ ಹರತಾಳು ಹಾಲಪ್ಪ ಟಿಕೆಟ್ ಪಡೆದಿದ್ದು, ಚುನಾವಣಾ ಯುದ್ಧದ ಆರಂಭಿಕ ಯಶಸ್ಸು ಸಾಧಿಸಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಗುಟ್ಟು ಪಕ್ಷ ಇನ್ನೂ ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.