ADVERTISEMENT

ಜಗದೀಶ ಶೆಟ್ಟರ್ ಮಾಡಿರುವುದು ಅಕ್ಷಮ್ಯ ಅಪರಾಧ, ಜನ ಕ್ಷಮಿಸಲ್ಲ: ಯಡಿಯೂರಪ್ಪ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2023, 10:51 IST
Last Updated 16 ಏಪ್ರಿಲ್ 2023, 10:51 IST
ಜಗದೀಶ್ ಶೆಟ್ಟರ್ ಮತ್ತು ಬಿ.ಎಸ್. ಯಡಿಯೂರಪ್ಪ
ಜಗದೀಶ್ ಶೆಟ್ಟರ್ ಮತ್ತು ಬಿ.ಎಸ್. ಯಡಿಯೂರಪ್ಪ    

ಬೆಂಗಳೂರು: ‘ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ಆದರೆ, ಇಂದು ಅವರು ಕೈಗೊಂಡ ನಿರ್ಧಾರ ಹಾಗೂ ನೀಡಿರುವ ಹೇಳಿಕೆಗಳಿಂದ ನಮಗೆ ಬೇಸರವಾಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ರಾಜೀನಾಮೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶೆಟ್ಟರ್‌ ಅವರಿಗೆ ಪಕ್ಷ ಎಲ್ಲವನ್ನೂ ನೀಡಿತ್ತು. ನಾವೇ ಮುಂದೆ ನಿಂತು ಅವರನ್ನು ಮುಖ್ಯಮಂತ್ರಿ ಮಾಡಿದೆವು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವಾಗ ಅವರ ಜತೆ ಹೆಜ್ಜೆ ಹಾಕುವುದು ನಮ್ಮ ಕರ್ತವ್ಯ. ಶೆಟ್ಟರ್‌ ಅವರ ಹೇಳಿಕೆ ಮತ್ತು ನಿರ್ಧಾರ ಅವರು ನಂಬಿದ ಸಿದ್ಧಾಂತಕ್ಕೆ ತದ್ವಿರುದ್ಧ’ ಎಂದು ವಾಗ್ದಾಳಿ ನಡೆಸಿದರು.

‘ಶೆಟ್ಟರ್‌ ಅವರನ್ನು ಜನ ಗುರುತಿಸಲು ಕಾರಣ ಬಿಜೆಪಿ. ಕೇಂದ್ರದಲ್ಲಿ ತಮಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ರಾಜ್ಯ ಉಸ್ತುವಾರಿ ಹಾಗೂ ಪ್ರಹ್ಲಾದ್‌ ಜೋಶಿಯವರು ಆಶ್ವಾಸನೆ ನೀಡಿದರೂ ಅವರು ಹಠ ಮಾಡಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು ಅಕ್ಷಮ್ಯ ಅಪರಾಧ. ಇದನ್ನು ನಾಡಿನ ಜನ ಕ್ಷಮಿಸಲು ಸಾಧ್ಯವಿಲ್ಲ’ ಎಂದು ಯಡಿಯೂರಪ್ಪ ಟೀಕಿಸಿದರು.

ADVERTISEMENT

‘ಜಗದೀಶ ಶೆಟ್ಟರ್ ಮಾಡಿರುವುದು ಅಕ್ಷಮ್ಯ ಅಪರಾಧ, ಪಕ್ಷಕ್ಕೆ ಮಾಡಿರುವಂತಹ ದ್ರೋಹ, ಇದನ್ನು ಯಾರು ಕ್ಷಮಿಸುವುದಿಲ್ಲ. ಜಗತ್ತಿನ ಯಾವುದೇ ಶಕ್ತಿಯು ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಬಿಎಸ್‌ವೈ ಗುಡುಗಿದರು.

‘ಬಿ.ಬಿ. ಶಿವಪ್ಪನವರನ್ನು ಎದುರು ಹಾಕಿಕೊಂಡು ಜಗದೀಶ ಶೆಟ್ಟರ್ ಅವರಿಗೆ ವಿರೋಧ ಪಕ್ಷ ಸ್ಥಾನ ನೀಡಲಾಗಿತ್ತು. ಅಲ್ಲದೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, 6 ಬಾರಿ ಶಾಸಕ ಸ್ಥಾನ ಹಾಗೂ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಲಾಗಿತ್ತು. ಇದನ್ನು ಎಂಬುದನ್ನು ಶೆಟ್ಟರ್ ಮರೆತಿದ್ದಾರೆ’ ಎಂದು ಬಿಎಸ್‌ವೈ ಆಕ್ರೋಶ ಹೊರಹಾಕಿದರು.

2018ರ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದವರು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದರು, ಇದನ್ನು ರಾಜ್ಯದ ಜನ ಒಕ್ಕೊರಲಿನಿಂದ ತಿರಸ್ಕಾರ ಮಾಡಿದ್ದರು ಎಂಬುದನ್ನು ಶೆಟ್ಟರ್ ಮರೆಯಬಾರದು ಎಂದು ಬಿಎಸ್‌ವೈ ತಿಳಿಸಿದರು.

ರಘುಪತಿ ಭಟ್, ಎಸ್‌.ಅಂಗಾರ, ಹಾಗೂ ಕೆ.ಎಸ್. ಈಶ್ವರಪ್ಪ ಅವರು ಗೌರವಯುತವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದು, ಅವರನ್ನು ಗೌರವಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಟಿಕೆಟ್ ವಂಚಿತ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ ಶೆಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಭಾನುವಾರ ತಮ್ಮ ಬೆಂಬಲಿಗರ ಜೊತೆಗೂಡಿ ಬಂದ ಶೆಟ್ಟರ್ ಕಾಗೇರಿ ಜೊತೆ ಕೆಲ ಸಮಯ ಚರ್ಚಿಸಿ ನಂತರ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಶನಿವಾರ ಬಿಜೆಪಿ ಪ್ರಮುಖರು ಸೇರಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಜೊತೆ ನಡೆಸಿದ ಸಂಧಾನ ವಿಫಲವಾದ ಕಾರಣ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.