ADVERTISEMENT

ಕಾಂಗ್ರೆಸ್ ಗೆದ್ದರೆ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಬಲ: ಸುಧೀಂದ್ರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 3 ಮೇ 2023, 13:22 IST
Last Updated 3 ಮೇ 2023, 13:22 IST
ಸುಧೀಂದ್ರ ಕುಲಕರ್ಣಿ
ಸುಧೀಂದ್ರ ಕುಲಕರ್ಣಿ   

ಹುಬ್ಬಳ್ಳಿ: ‘ಕರ್ನಾಟಕದ ಚುನಾವಣೆಯು ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿದೆ. ಕಾಂಗ್ರೆಸ್‌ ಗೆದ್ದರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಬಲ ಬರಲಿದೆ’ ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಚುನಾವಣೆಯ ಫಲಿತಾಂಶವನ್ನು ದೇಶವೇ ಕಾತರದಿಂದ‌ ಕಾಯುತ್ತಿದೆ. ಬಿಜೆಪಿ ಸೋಲುವ ಲಕ್ಷಣಗಳು ಕಾಣುತ್ತಿವೆ. ಇಲ್ಲಿ ಸೋತರೇ ದೇಶದಾದ್ಯಂತ ವಿರೋಧ ಪಕ್ಷಗಳಿಗೆ ನೈತಿಕ ಶಕ್ತಿ ಬರುತ್ತದೆ’ ಎಂದರು.

‘ಬಿಜೆಪಿ ಈಗ ಸಂಪೂರ್ಣ ಬದಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಿಂದ ಆ ಪಕ್ಷ ಕೆಳಗಿಳಿಯಬೇಕಿದೆ. ಕೇಂದ್ರ ಮತ್ತು ರಾಜ್ಯದಲ್ಲಿಯೂ ಅಧಿಕಾರದಲ್ಲಿರುವ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುತ್ತಿದ್ದಾರೆ. ಬಿಜೆಪಿಯ ಈ ಪರಿಕಲ್ಪನೆ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಇವರ ಹೇಳುವ ಡಬಲ್ ಎಂಜಿನ್ ಸರ್ಕಾರದಲ್ಲಿ ಒಬ್ಬನೇ ಚಾಲಕನಿದ್ದು, ಕೇಂದ್ರ ಮತ್ತು ರಾಜ್ಯವನ್ನು ಸಹ ನಿಯಂತ್ರಿಸುತ್ತಿರುತ್ತಾನೆ. ಇಲ್ಲಿ ಯಾರೇ ಮುಖ್ಯಮಂತ್ರಿಯಾದರೂ, ಅವರ ರಿಮೋಟ್ ಕಂಟ್ರೊಲ್ ಮೋದಿ ಮತ್ತು ಅಮಿತ್ ಶಾ ಬಳಿ ಇರುತ್ತದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಬಹುಪಕ್ಷೀಯ ವ್ಯವಸ್ಥೆ ನಮ್ಮ ಪ್ರಜಾಪ್ರಭುತ್ವದ ಬುನಾದಿ. ಯಾವುದೇ ಸರ್ಕಾರವಿದ್ದರೂ, ಕೇಮದ್ರ ಸರ್ಕಾರ ಎಲ್ಲಾ ರಾಜ್ಯಗಳೊಂದಿಗೆ ಸಮಾನ ನ್ಯಾಯ ಮತ್ತು ಪಕ್ಷಪಾತವಿಲ್ಲದ ತತ್ವಗಳ ಆಧಾರದ ಮೇಲೆ ಕೆಲಸ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಬಿಜೆಪಿಯ ನೀತಿ ಇದಕ್ಕೆ ವಿರುದ್ಧವಾಗಿದೆ. ಇವರಿಗೆ ಕಮ್ಯುನಿಸ್ಟ್ ಚೀನಾ ದೇಶದಂತಹ ವಿರೋಧ ಪಕ್ಷ ಮುಕ್ತ ಭಾರತ ಬೇಕಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದ ಮತದಾರರು ಅಸ್ಥಿರ ಸರ್ಕಾರದ ಬದಲು, ಸ್ಥಿರ ಕಾಂಗ್ರೆಸ್ ಸರ್ಕಾರವನ್ನು ತರಬೇಕು. ಬಿಜೆಪಿಯ ಮಾಜಿ ನಾಯಕ ಜಗದೀಶ ಶೆಟ್ಟರ್ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆಪರೇಷನ್ ಕಮಲವೆಂಬ ಅನೈತಿಕ ರಾಜಕಾರಣ ಪುನರಾವರ್ತನೆಯಾಗದಂತೆ ತಡೆಯಬೇಕು’ ಎಂದರು.

‘ಅನೈತಿಕ ರಾಜಕಾರಣ ಮಾಡದ ವಾಜಪೇಯಿ’

‘ವಾಜಪೇಯಿ ಇಂದು ಬದುಕಿದ್ದರೆ ಮತ್ತು ಎಲ್‌.ಕೆ. ಅಡ್ವಾಣಿ ಅವರು ರಾಜಕೀಯವಾಗಿ ಸಕ್ರಿಯವಾಗಿದ್ದಿದ್ದರೆ, ಬಿಜೆಪಿಯ ಈಗಿನ ರಾಜಕಾರಣವನ್ನು ವಿರೋಧಿಸುತ್ತಿದ್ದರು. ಕೇವಲ ಒಂದು ಮತದಿಂದ ವಾಜಪೇಯಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡರು. ಅವರೇನಾದರೂ, ಈಗಿನ ಬಿಜೆಪಿಯ ಆಪರೇಷನ್ ಕಮಲ ಮಾದರಿಯನ್ನು ಅನುಸರಿಸಿದ್ದಿದ್ದರೆ ಸರ್ಕಾರ ಉಳಿಸಿಕೊಳ್ಳಬಹುದಿತ್ತು. ಅವರು ಅನೈತಿಕ ರಾಜಕಾರಣ ಮಾಡಲಿಲ್ಲ. ಅದರ ಫಲವಾಗಿ, ಬಿಜೆಪಿ ಪೂರ್ಣ ಬಹುಮತದೊಂದಿಗೆ ದೇಶದಲ್ಲಿ ಅಧಿಕಾರ ಹಿಡಿಯಿತು. ಜಾತಿ ಮತ್ತು ಧರ್ಮಾಧಾರಿತ ಮತ ಬ್ಯಾಂಕ್ ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಸುಧೀಂದ್ರ ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.