
ಬಾಲಕೃಷ್ಣ ಪಿ.ಎಚ್.
ದಾವಣಗೆರೆ: ಮಾಯಕೊಂಡ (ಎಸ್.ಸಿ ಮೀಸಲು) ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಗೀಶ್ ಬಿ.ಎಂ ಅವರು ಬೇಡಜಂಗಮ ಜಾತಿ ಪ್ರಮಾಣಪತ್ರದೊಂದಿಗೆ ಸಲ್ಲಿಸಿದ್ದ ನಾಮಪತ್ರವು ಜಾತಿ ಪ್ರಮಾಣಪತ್ರ ರದ್ದುಗೊಂಡ ಕಾರಣಕ್ಕೆ ತಿರಸ್ಕೃತಗೊಂಡಿದೆ. ಆದರೆ, ಅವರ ಪತ್ನಿ ಪುಷ್ಪಾ ಬಿ.ಎಂ. ಅಂಥದೇ ಜಾತಿ ಪ್ರಮಾಣಪತ್ರದೊಂದಿಗೆ ಸಲ್ಲಿಸಿರುವ ನಾಮಪತ್ರ ಪುರಸ್ಕೃತಗೊಂಡಿದೆ. ಅವರು ಚುನಾವಣೆಯ ಕಣದಲ್ಲಿ ಉಳಿದಿದಿದ್ದಾರೆ.
ವಾಗೀಶ್ ಅವರು ವೀರಶೈವ ಲಿಂಗಾಯತ ಜಂಗಮ ಸಮುದಾಯಕ್ಕೆ ಸೇರಿದ್ದು, ‘ಬೇಡ ಜಂಗಮ’ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದಾರೆ. ಅದನ್ನು ರದ್ದುಗೊಳಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಧಿಕಾರಿ ಮುಂದೆ ಹಾಜರುಪಡಿಸಿ ಎಂದು ಹೈಕೋರ್ಟ್ ದೂರುದಾರರಿಗೆ ತಿಳಿಸಿತ್ತು. ಬೆಂಗಳೂರಿನಲ್ಲಿ ಜಾತಿ ಪ್ರಮಾಣಪತ್ರ ನೀಡಿದ್ದರಿಂದ ಬೆಂಗಳೂರು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಈಚೆಗಷ್ಟೇ ಪ್ರಮಾಣಪತ್ರ ರದ್ದು ಮಾಡಿದ್ದರಿಂದ ನಾಮಪತ್ರ ತಿರಸ್ಕೃತಗೊಂಡಿದೆ.
ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ವಾಗೀಶ್ ಅವರು ಟಿಕೆಟ್ ಸಿಗದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅವರ ಪತ್ನಿ ಪುಷ್ಪಾ ಬಿ.ಎಂ ಸಹ ಸ್ವತಂತ್ರ ಸ್ಪರ್ಧೆಯ ಇರಾದೆಯೊಂದಿಗೆ ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದರು.
ವಾಗೀಶ್ ಅವರ ಜಾತಿ ಪ್ರಮಾಣ ಪತ್ರ ರದ್ದಾಗಿರುವುದರಿಂದ ನಾಮಪತ್ರ ತಿರಸ್ಕೃತಗೊಂಡಿದೆ. ಪುಷ್ಪಾ ಅವರ ‘ಬೇಡ ಜಂಗಮ’ ಪ್ರಮಾಣಪತ್ರ ಚಾಲ್ತಿಯಲ್ಲಿ ಇರುವುದರಿಂದ ಅವರ ನಾಮಪತ್ರ ಪುರಸ್ಕೃತಗೊಂಡಿದೆ.
‘ಪತಿ, ಪತ್ನಿ, ಅಣ್ಣ, ತಮ್ಮ, ಅಕ್ಕ, ತಂಗಿ ಎಂಬ ಸಂಬಂಧಗಳನ್ನು ಪರಿಶೀಲನೆ ವೇಳೆ ನೋಡಲಾಗುವುದಿಲ್ಲ. ಪ್ರತಿ ಅಭ್ಯರ್ಥಿಯನ್ನೂ ಪ್ರತ್ಯೇಕವಾಗಿ ನೋಡಲಾಗುತ್ತದೆ. ಪುಷ್ಪಾ ಅವರ ನಾಮಪತ್ರದೊಂದಿಗೆ ಸಲ್ಲಿಸಿರುವ ದಾಖಲೆಗಳು ಸಮರ್ಪಕವಾಗಿವೆ. ಹೀಗಾಗಿ ಅವರ ನಾಮಪತ್ರ ಪುರಸ್ಕರಿಸಲಾಗಿದೆ. ವಾಗೀಶ್ ಅವರ ದಾಖಲೆಗಳು ಸರಿ ಇಲ್ಲದಿರುವುದರಿಂದ ತಿರಸ್ಕರಿಸಲಾಗಿದೆ’ ಎಂದು ಮಾಯಕೊಂಡ ಕ್ಷೇತ್ರದ ಚುನಾವಣಾಧಿಕಾರಿ ದುರ್ಗಾಶ್ರೀ ಎನ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು, ಜಾತಿ ಪ್ರಮಾಣಪತ್ರ ನೀಡಿರುವುದರಿಂದ ಹೀಗೆ ಆಗಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾದ ಕೂಡಲೇ ಅವರನ್ನು ಬಂಧಿಸಬೇಕು. ಆದರೆ, ಇನ್ನೂ ಬಂಧಿಸಿಲ್ಲ. ಪತಿಯ ಪ್ರಮಾಣಪತ್ರ ತಿರಸ್ಕೃತಗೊಂಡರೆ ಪತ್ನಿಗೂ ಅದು ಅನ್ವಯವಾಗಬೇಕು. ಸರ್ಕಾರವು ಪರಿಶಿಷ್ಟರಿಗೆ ಮೀಸಲಾತಿ ಸಿಗಕೂಡದು ಎಂದೇ ‘ಬೇಡ ಜಂಗಮ’ರಲ್ಲದವರಿಗೂ ‘ಬೇಡ ಜಂಗಮ’ ಪ್ರಮಾಣ ಪತ್ರ ನೀಡುತ್ತಿದೆ. ಬಿಜೆಪಿ ಮುಖಂಡರ ಕುಮ್ಮಕ್ಕಿನಿಂದ ವಾಗೀಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಚಿನ್ನಸಮುದ್ರ ಶೇಖರ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರೆ ಇಂಥ ಅವಾಂತರ ಆಗುತ್ತಿರಲಿಲ್ಲ. ಪುಷ್ಪಾ ಅವರ ‘ಬೇಡ ಜಂಗಮ’ ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ನನ್ನ ಜಾತಿ ಪ್ರಮಾಣಪತ್ರ ರದ್ದು ಮಾಡಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇನೆ. ಪತ್ನಿಯ ಜಾತಿ ಪ್ರಮಾಣಪತ್ರಕ್ಕೆ ಆಕ್ಷೇಪಗಳಿಲ್ಲದ ಕಾರಣ ಅವರು ಕಣದಲ್ಲಿದ್ದಾರೆ.
–ವಾಗೀಶ್ ಬಿ.ಎಂ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
‘ಬೇಡುವ ಜಂಗಮರು ಬೇಡ ಜಂಗಮರಲ್ಲ’ ವೀರಶೈವ ಜಂಗಮರು ಮತ್ತು ಬೇಡಜಂಗಮರು ಬೇರೆ ಬೇರೆ. ಆದರೂ 2009ರಿಂದ ವೀರಶೈವ ಜಂಗಮರು ‘ಬೇಡ ಜಂಗಮ’ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದು ಚಿನ್ನಸಮುದ್ರ ಶೇಖರ ನಾಯ್ಕ ತಿಳಿಸಿದರು. ಬೇಡ ಅಂದರೆ ಬೇಡುವ ಎಂದರ್ಥವಲ್ಲ. ಸಣ್ಣಪುಟ್ಟ ಬೇಟೆಯಾಡಿಕೊಂಡು ಇತರ ಕಸುಬು ಮಾಡಿಕೊಂಡು ಬದುಕುವ ಪರಿಶಿಷ್ಟ ಜಾತಿಗೆ ಸೇರಿರುವ ಸಣ್ಣ ಜಾತಿಯವರು. ರಾಜ್ಯದಲ್ಲಿ 3000 ಕುಟುಂಬಗಳಷ್ಟೇ ಇವೆ. ಇವರು ಮಾಂಸಾಹಾರಿಗಳು. ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಬೇಡ ಜಂಗಮ ಕುಟುಂಬ ಇಲ್ಲದಿದ್ದರೂ 1500ಕ್ಕೂ ಅಧಿಕ ಜನ ‘ಬೇಡ ಜಂಗಮ’ ಪ್ರಮಾಣ ಪತ್ರ ಪಡೆದಿರುವುದು ಗೊತ್ತಾಗಿದೆ. ಗೊತ್ತಾಗದೇ ಇರುವುದು ಎಷ್ಟಿದೆ ನೋಡಬೇಕು ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.