ADVERTISEMENT

ಪ್ರಿಯಾಂಕ ಖರ್ಗೆ, ಯತ್ನಾಳ್‌ಗೆ ಚುನಾವಣಾ ಆಯೋಗ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 3 ಮೇ 2023, 15:39 IST
Last Updated 3 ಮೇ 2023, 15:39 IST
ಕೇಂದ್ರ ಚುನಾವಣಾ ಆಯೋಗ
ಕೇಂದ್ರ ಚುನಾವಣಾ ಆಯೋಗ   

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಎದುರಾಳಿ ಪಕ್ಷದ ನಾಯಕರ ವೈಯಕ್ತಿಕ ನಿಂದನೆ ಮಾಡಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಬಿಜೆಪಿಯ ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾಂಗ್ರೆಸ್‌ನ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿ ‍ಪ್ರಿಯಾಂಕ್‌ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಷೋಕಾಸ್‌ ನೋಟಿಸ್‌ ನೀಡಿದೆ. 

ಪ್ರಚಾರದ ವೇಳೆ ಯತ್ನಾಳ, ‘ಸೋನಿಯಾ ನಾಗಕನ್ನಿಕೆಯೇ’ ಎಂದು ಪ್ರಶ್ನಿಸಿದ್ದರು. ‘ಕೆಲಸ ಮಾಡದವರು ನಾಲಾಯಕ್‌’ ಎಂದು ಪ್ರಿಯಾಂಕ್‌ ಟೀಕಿಸಿದ್ದರು. ಯತ್ನಾಳ ವಿರುದ್ಧ ಕಾಂಗ್ರೆಸ್‌ ನಿಯೋಗ ಹಾಗೂ ಪ್ರಿಯಾಂಕ್‌ ವಿರುದ್ಧ ಬಿಜೆಪಿ ನಿಯೋಗವು ಆಯೋಗಕ್ಕೆ ದೂರು ನೀಡಿದ್ದವು. 

ಏ.28ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಪರ ಮತಯಾಚನೆ ಮಾಡುವ ಸಮಯದಲ್ಲಿ ಯತ್ನಾಳ, ‘ಸೋನಿಯಾ ಗಾಂಧಿ ನಾಗಕನ್ನಿಕೆಯೇ’ ಎಂದು ಪ್ರಶ್ನಿಸಿದ್ದರು.

ADVERTISEMENT

ಅಂದಿನ ಭಾಷಣದಲ್ಲಿ ಯತ್ನಾಳ, ’ಮೋದಿ ಜಗತ್ತಿನ ನಾಯಕ ಎನ್ನುವುದನ್ನೂ ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಂಥ ನಾಯಕನನ್ನು ನಾಗರಹಾವಿಗೆ ಹೋಲಿಸುವುದು ಸರಿಯೇ? ಕಾಂಗ್ರೆಸ್‌ ನಾಯಕರು ಸೋನಿಯಾ ಮಾತಿಗೆ ಕುಣಿದು ಈ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸೋನಿಯಾ ವಿಷಕನ್ಯೆಯೇ’ ಎಂದು ಕೇಳಿದ್ದರು.

‘ಭಾರತವನ್ನು ಹಾಳು ಮಾಡಿದ ಸೋನಿಯಾ ಗಾಂಧಿ ಚೀನಾ ಮತ್ತು ಪಾಕಿಸ್ತಾನದ ಎಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಚಹಾ ಮಾರಾಟ ಮಾಡುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಅವಮಾನ ಮಾಡುತ್ತೀರಾ?’ ಎಂದು ಪ್ರಶ್ನಿಸಿದ್ದರು.

’ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್‌ ಎಂದು ಕರೆದಿರುವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬಿಜೆಪಿಯ ನಿಯೋಗವು ಆಯೋಗಕ್ಕೆ ಮಂಗಳವಾರ ದೂರು ನೀಡಿತ್ತು. 

ಅಭ್ಯರ್ಥಿಗಳು ಹಾಗೂ ಪಕ್ಷಗಳ ಪ್ರಚಾರಕರ ವೈಯಕ್ತಿಕ ನಿಂದನೆ ಮಾಡದಂತೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ಮಾದರಿ ನೀತಿಸಂಹಿತೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ಈ ಇಬ್ಬರು ನಾಯಕರು ಮಾದರಿ ನೀತಿಸಂಹಿತೆಯ ಷರತ್ತು 4.3.1, 4.3.2 ಹಾಗೂ 4.3.2 (2) ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಇಬ್ಬರಿಗೂ ಷೋಕಾಸ್‌ ನೋಟಿಸ್‌ ಜಾರಿ ಮಾಡಿರುವ ಆಯೋಗವು, ಮೇ 4ರ ಸಂಜೆ 5 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಒಂದು ವೇಳೆ ಉತ್ತರ ನೀಡದೆ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದೆ. 

ಪ್ರಚಾರದ ಗುಣಮಟ್ಟ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗ, ಎಲ್ಲ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ಪ್ರಚಾರದ ವೇಳೆ ಎಚ್ಚರಿಕೆ ಹಾಗೂ ಸಂಯಮದಿಂದ ಹೇಳಿಕೆಗಳನ್ನು ನೀಡಬೇಕು ಎಂದು ಮಂಗಳವಾರ ಸಲಹೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.