ADVERTISEMENT

ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತಂದೇ ಕಣ್ಣು ಮುಚ್ಚುವೆ: ದೇವೇಗೌಡ

ದೇವೇಗೌಡರ ಭಾವನಾತ್ಮಕ ನುಡಿ

​ಪ್ರಜಾವಾಣಿ ವಾರ್ತೆ
Published 5 ಮೇ 2023, 14:36 IST
Last Updated 5 ಮೇ 2023, 14:36 IST
ದೇವೇಗೌಡ
ದೇವೇಗೌಡ   (ಸಂಗ್ರಹ ಚಿತ್ರ)

ರಾಮನಗರ: ‘90ರ ವಯಸ್ಸಿನಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತಂದೇ ಕಣ್ಣು ಮುಚ್ಚುವೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಭಾವನಾತ್ಮಕವಾಗಿ ನುಡಿದರು.

ಚನ್ನಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದ ಜೆಡಿಎಸ್‌ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಜನ ಬೆಂಬಲಿಸಿದ್ದಾರೆ. ಆದರೆ, ಕರ್ನಾಟಕದ ಜನರಿಗೆ ಏನಾಗಿದೆಯೋ ಗೊತ್ತಿಲ್ಲ. ಕುಮಾರಸ್ವಾಮಿ ಇಷ್ಟು ಕೆಲಸ ಮಾಡಿದ್ದರೂ ನಾನು ಬಂದು ಮತ ಕೇಳಬೇಕಾಗಿದೆ. ಜನರು ಈ ಬಗ್ಗೆ ತೀರ್ಮಾನ ಮಾಡಬೇಕು’ ಎಂದರು.

ADVERTISEMENT

‘ಕಾಶ್ಮೀರಕ್ಕೆ 10 ವರ್ಷ ದೇಶದ ಯಾವ ಪ್ರಧಾನಿಯೂ ಹೋಗಿರಲಿಲ್ಲ. ಹೋದರೆ ಹೊಡೆದು ಹಾಕುತ್ತಾರೆ ಎನ್ನುವ ಭಯ ಇತ್ತು. ಆದರೆ, ನಾನು ಪ್ರಧಾನಿಯಾದ ನಂತರ, ಸತ್ತರೆ ನನ್ನನ್ನು ಹೊಳೆನರಸೀಪುರದಲ್ಲಿ ಮಣ್ಣು ಮಾಡುವಂತೆ ಹೇಳಿ ಹೋಗಿದ್ದೆ. ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಶಾಂತಿ ತಂದೆ. ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ನಾವು. ಮುಸ್ಲಿಮರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ, ಪುತ್ರ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚಿಸಿದ ಅವರು ‘ಮಂಡ್ಯದಲ್ಲಿ ನಿಲ್ಲುವಂತೆ ಕಾರ್ಯಕರ್ತರು ಹೇಳಿದ್ದರೂ ಕುಮಾರಸ್ವಾಮಿ ಕೇಳಲಿಲ್ಲ. ಇಲ್ಲಿಯೇ ಸ್ಪರ್ಧೆ ಮಾಡಿದ್ದಾರೆ. ಯಾರು ಎಷ್ಟೇ ದುಡ್ಡು ಕೊಟ್ಟು, ಅಪಪ್ರಚಾರ ಮಾಡಿದರೂ ನೀವೆಲ್ಲ ಕುಮಾರಸ್ವಾಮಿ ಅವರನ್ನೇ ಗೆಲ್ಲಿಸಲು ಪಣ ತೊಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.