ADVERTISEMENT

ಮೈತ್ರಿಯಿಂದ ರಾಜ್ಯದಲ್ಲಿ ಹೊಸ ರಾಜಕೀಯ ಗಾಳಿ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:38 IST
Last Updated 31 ಮಾರ್ಚ್ 2024, 15:38 IST
ಗದಗ ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿದರು
ಗದಗ ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಗದಗ: ‘ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯಿಂದಾಗಿ ರಾಜ್ಯದಲ್ಲಿ ಹೊಸ ರಾಜಕೀಯ ಗಾಳಿ ಬೀಸುತ್ತಿದೆ. ಜತೆಗೆ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಚುನಾವಣಾ ಉತ್ಸಾಹ ಹೆಚ್ಚಾಗಿದೆ’ ಎಂದು ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜೆಡಿಎಸ್‌ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಜತೆಗಿನ ಸಭೆಯಲ್ಲಿ ಮಾತನಾಡಿದರು.

‘2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಪಕ್ಷಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ಹೊಂದಿದ್ದು, ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ. ಬಿಜೆಪಿ ಮತ್ತು ಜೆಡಿಎಸ್‌ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆ ಆಗಿದ್ದು, ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಸಮನ್ವಯ ಮುಂದುವರಿಸಿಕೊಂಡು ಹೋಗಬೇಕು ಎಂದು ತೀರ್ಮಾನವಾಗಿದೆ’ ಎಂದು ತಿಳಿಸಿದರು.

ADVERTISEMENT

ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್‌ಗೆ ನೋಟಿಸ್‌ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಗೆ ಕಾಂಗ್ರೆಸ್‌ ಬಗ್ಗುವುದಿಲ್ಲ’ ಎಂದು ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ‘ಕಾಂಗ್ರೆಸ್‌ ಸದಾಕಾಲ ಕಪ್ಪುಹಣಕ್ಕೆ ಉತ್ತೇಜನ ನೀಡುತ್ತ ಬಂದಿದೆ. ₹600 ಕೋಟಿ ಹಣವನ್ನು ಅಕ್ರಮವಾಗಿ ಸಂಗ್ರಹ ಮಾಡಿದೆ. ಇದನ್ನು ಪ್ರಶ್ನೆ ಮಾಡಬಾರದು ಅಂದರೆ ಹೇಗೆ? ಐಟಿ ಇಲಾಖೆ ತನ್ನ ಕೆಲಸ ಮಾಡುತ್ತಿದೆ. ಕಾನೂನು ಪ್ರಕಾರ ಇದ್ದರೆ ಯಾಕೆ ಭಯ? ಇದರಲ್ಲಿ ಭಯೋತ್ಪಾದನೆ ಪ್ರಶ್ನೆ ಎಲ್ಲಿ ಬರುತ್ತದೆ? ಕಾನೂನಿನ ವಿರುದ್ಧವಾಗಿ ನಡೆದುಕೊಂಡಾಗ ಮಾತ್ರ ಭಯ ಬರಬೇಕು’ ಎಂದು ಹೇಳಿದರು.

‘ಹಲವು ವರ್ಷಗಳಿಂದ ನೋಟಿಸ್‌ ಕೊಟ್ಟರೂ ಇವರು ಉತ್ತರ ಕೊಟ್ಟಿಲ್ಲ’ ಎಂದು ಕಿಡಿಕಾರಿದರು.

‘ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರ್ವಭಂಗ ಮಾಡಬೇಕು’ ಎಂಬ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಜೆಡಿಎಸ್‌ ಎಲ್ಲಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಕ್ಕೆ ಎಚ್‌.ಡಿ.ದೇವೇಗೌಡರು ಆ ರೀತಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಟಿಕೆಟ್‌ಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಂಡಾಯ, ಪೈಪೋಟಿ ಬಹುತೇಕ ಶಮನವಾಗಿದೆ. ಮಂಡ್ಯದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಚ್‌.ಡಿ.ಕುಮಾರಸ್ವಾಮಿ ಕೂಡ ಈ ಸಂಬಂಧ ಎರಡನೇ ಹಂತದ ಮಾತುಕತೆ ನಡೆಸಿದ್ದಾರೆ. ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ಮಾಡಿದ್ದಾರೆ. ಇವೆಲ್ಲದರ ಫಲಶ್ರುತಿಯಿಂದ ಎಲ್ಲರೂ ಒಗ್ಗಟ್ಟಾಗಿ ಮಂಡ್ಯದಲ್ಲಿ ಗೆಲುವು ಸಾಧಿಸುತ್ತೇವೆ. ಅದೇರೀತಿ ಚಿತ್ರದುರ್ಗದಲ್ಲೂ ಬಂಡಾಯ ಶಮನ ಆಗಲಿದೆ’ ಎಂದು ತಿಳಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, ‘ಯಾವುದೇ ಪಕ್ಷ ಇರಲಿ. ಮಹಿಳೆಯರ ಬಗ್ಗೆ ಗೌರವಪೂರ್ವಕ ಭಾವನೆಗಳು ಇರಬೇಕು. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಅಡುಗೆ ಮಾಡುವುದಕ್ಕೆ ಲಾಯಕ್‌ ಅನ್ನುವುದು ಎಷ್ಟು ಸರಿ? ಅವರ ಮಾತಿನಿಂದ ಮಹಿಳೆಯರ ಮನಸ್ಸಿಗೆ ನೋವಾಗಿದೆ. ಇದು ಅವರ ಮನಸ್ಥಿತಿಯನ್ನು ತೋರುತ್ತದೆ’ ಎಂದು ಹೇಳಿದರು.

ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಇದ್ದರು.

ಜೆಡಿಎಸ್‌ ಶಾಲು ಹಾಕಿಕೊಂಡಿದ್ದು ಡಬಲ್‌ ಜವಾಬ್ದಾರಿ
ಹಾವೇರಿ–ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಗದಗ ಜಿಲ್ಲಾ ಜೆಡಿಎಸ್‌ ಕಚೇರಿಗೆ ಬರುತ್ತಿದ್ದಂತೆ ಮುಖಂಡರು ಅವರಿಗೆ ಜೆಡಿಎಸ್‌ ಶಾಲು ಹಾಕಿ ಬರಮಾಡಿಕೊಂಡರು. ‘ನಿಮ್ಮ ಹೆಗಲ ಮೇಲೆ ಜೆಡಿಎಸ್‌ ಶಾಲು ಇದೆ ಹೇಗನ್ನಿಸುತ್ತಿದೆ’ ಎಂಬ ಮಾಧ್ಯಮದವರ ಪ್ರಶ್ನೆಗೆ ನಸುನಕ್ಕ ಬೊಮ್ಮಾಯಿ ‘ಹಂಗೇನಿಲ್ಲ... ಮೈತ್ರಿ ಇದೆ. ಇದು ಡಬಲ್‌ ಜವಾಬ್ದಾರಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.