ADVERTISEMENT

ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೀನಿ ಎಂದಿದ್ದ ದೇವೇಗೌಡರು: ಸಿಎಂ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2024, 13:33 IST
Last Updated 18 ಏಪ್ರಿಲ್ 2024, 13:33 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವರಧಿಯ ಹತ್ತು ವರ್ಷಗಳಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ‘ಪ್ರಜಾಧ್ವನಿ–2’ ಜನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರನ್ನು ಗರಿಷ್ಠ ಅಂತರದಿಂದ ಗೆಲ್ಲಿಸಿಕೊಂಡುವಂತೆ ಕರೆ ನೀಡಿದ್ದಾರೆ.

ಕೊಟ್ಟ ಮಾತು ಈಡೇರಿಸದ ಬಿಜೆಪಿಗೆ ಹಾಗೂ ಅವರ ಜತೆ ಸೇರಿರುವ ಜೆಡಿಎಸ್‌ಗೆ ಜನರ ಮತ ಕೇಳುವ ನೈತಿಕತೆ ಇಲ್ಲ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ಎಚ್‌.ಡಿ ದೇವೇಗೌಡರು ಹೇಳಿದ್ದರು. ಆದರೆ, ಈಗ ಅದೇ ಮೋದಿ ಅವರನ್ನು ಅಪ್ಪಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ ಆಗುತ್ತದೆ ಎನ್ನುವುದು ದೇವೇಗೌಡರ ಭ್ರಮೆಯಾಗಿದೆ. ನಮ್ಮ ಸರ್ಕಾರ ಐದು ವರ್ಷವೂ ಸುಭದ್ರವಾಗಿರುತ್ತದೆ ಮತ್ತು ಮತ್ತೆ ನಾವೇ ಗೆದ್ದು ಬರುತ್ತವೆ ಎಂದು ಹೇಳಿದ್ದಾರೆ.

ADVERTISEMENT

ಕೋವಿಡ್‌ ಸಂದರ್ಭದಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿ ಸೋತು ಮನೆ ಸೇರಿರುವ ಸುಧಾಕರ್‌ ಪರವಾಗಿ ಮತ ಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ನಡೆಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಹೀನಾಯವಾಗಿ ಸೋತಿದೆ. ಲೋಕಸಭೆ ಚುನಾವಣೆಯಲ್ಲೂ ಅದೇ ಗತಿ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಭಾರತೀಯರಿಗೆ ಭ್ರಮೆ ಹುಟ್ಟಿಸಿ ವಂಚಿಸಿದ ಮೋದಿ ಅವರನ್ನು ಈ ಬಾರಿ ದೇಶ ತಿರಸ್ಕರಿಸಲಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಗ್ಯಾರಂಟಿಗಳು ಜಾರಿಯಾಗಲಿವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ. ಕೇಂದ್ರದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಇಂತಹ 25 ಹೊಸ ಗ್ಯಾರಂಟಿಗಳು ಜಾರಿಗೆ ಬರಲಿವೆ. ಕಾಂಗ್ರೆಸ್‌ ನಾಡಿನ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತೇವೆ. ಸ್ವಾಮಿನಾಥನ್‌ ವರದಿಯನ್ನು ಜಾರಿ ಮಾಡಿ ರೈತರ ಕೈ ಹಿಡಿಯುತ್ತೇವೆ. ಶ್ರೀಮಂತರ 16 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಬಿಜೆಪಿ ಸರ್ಕಾರ ಮನ್ನಾ ಮಾಡಿದೆ. ಆದರೆ, ನಾವು ಇಡೀ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.