ADVERTISEMENT

LS Polls | 234 ರೌಡಿಗಳ ಮನೆ ಮೇಲೆ ದಾಳಿ

ಲೋಕಸಭಾ ಚುನಾವಣೆ ಮುಂಜಾಗ್ರತಾ ಕ್ರಮ: ಕೆಲವು ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 15:19 IST
Last Updated 21 ಮಾರ್ಚ್ 2024, 15:19 IST
ರೌಡಿಯೊಬ್ಬನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದರು
ರೌಡಿಯೊಬ್ಬನ ಮನೆಯಲ್ಲಿ ಪೊಲೀಸರು ಶೋಧ ನಡೆಸಿದರು   

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ 234 ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದಕ್ಷಿಣ ವಿಭಾಗದ ಜಯನಗರ, ಜೆ.ಪಿ.ನಗರ, ಬಸವನಗುಡಿ, ಸಿದ್ದಾಪುರ, ಬನಶಂಕರಿ, ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಸುಬ್ರಹ್ಮಣ್ಯಪುರ, ಕೋಣನಕುಂಟೆ, ತಲಘಟ್ಟಪುರ, ವಿ.ವಿ.ಪುರ, ಶಂಕರಪುರ, ಹನುಮಂತನಗರ, ಕೆಂಪೇಗೌಡ ನಗರ, ಗಿರಿನಗರ ಹಾಗೂ ಚನ್ನಮ್ಮನ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ರೌಡಿಗಳ ಮನೆಯಲ್ಲಿ ಪೊಲೀಸರು ಶೋಧ ನಡೆಸಿದರು.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲ ರೌಡಿಗಳು, ಕಾನೂನು ಸುವ್ಯಸ್ಥೆಗೆ ಧಕ್ಕೆ ತರುವ ಹಾಗೂ ಮತದಾರರನ್ನು ಬೆದರಿಸುವ ಬಗ್ಗೆ ಮಾಹಿತಿ ಇದೆ. ಹೀಗಾಗಿ, ವಿಶೇಷ ತಂಡಗಳನ್ನು ರಚಿಸಿ ಗುರುವಾರ ನಸುಕಿನಿಂದಲೇ ರೌಡಿಗಳ ಮನೆಗಳಲ್ಲಿ ಶೋಧ ನಡೆಸಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘234 ರೌಡಿಗಳ ಮನೆಯ ಎಲ್ಲ ಕಡೆಯೂ ಪರಿಶೀಲಿಸಲಾಯಿತು. ದಾಳಿ ಸಂದರ್ಭದಲ್ಲಿ 90 ರೌಡಿಗಳು ಮನೆಯಲ್ಲಿ ಇರಲಿಲ್ಲ. ಅವರು ಎಲ್ಲಿದ್ದಾರೆ? ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಉಳಿದ ರೌಡಿಗಳಿಗೆ ಅಪರಾಧಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ. ಕೆಲವರಿಂದ ಮುಚ್ಚಳಿಕೆ ಸಹ ಬರೆಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.