ADVERTISEMENT

ಯತ್ನಾಳಗೆ ಪಾಕಿಸ್ತಾನದ ಮೇಲೆ ಪ್ರೀತಿಯಿದ್ದರೆ ಅಲ್ಲಿಗೇ ಹೋಗಲಿ: ದಿನೇಶ್ ಗುಂಡೂರಾವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2024, 16:28 IST
Last Updated 6 ಏಪ್ರಿಲ್ 2024, 16:28 IST
<div class="paragraphs"><p>ದಿನೇಶ್ ಗುಂಡೂರಾವ್ </p></div>

ದಿನೇಶ್ ಗುಂಡೂರಾವ್

   

ಬೆಂಗಳೂರು: ಭಾರತೀಯ ಭ್ರಷ್ಟರ ಪಾರ್ಟಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಎಂಬ ಹುಚ್ಚು ಶಾಸಕ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ನನ್ನ ದೇಶ ಸರ್ವಜನಾಂಗದ ಶಾಂತಿಯ ತೋಟ. ಇಲ್ಲಿ ಎಲ್ಲಾ ಧರ್ಮದವರೂ ಒಂದಾಗಿ ಬಾಳುತ್ತಿದ್ದೇವೆ. ಯತ್ನಾಳ್‌ರಂತೆ ಮನೆ ಒಡೆಯೋ ಕೆಲಸ, ಕೀಳು ಭಾಷೆ ಬಳಕೆಯನ್ನು ನಾವು ಮಾಡಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

‘ಮತಾಂಧತೆಯಲ್ಲಿ ಬಿದ್ದು ಹೊರಳಾಡುತ್ತಿರುವ ಯತ್ನಾಳ ಮಾತೆತ್ತಿದರೆ ಪಾಕಿಸ್ತಾನ ಪಾಕಿಸ್ತಾನ ಎನ್ನುತ್ತಾರೆ ಅವರಿಗೆ ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿಯಿದ್ದರೇ ಅಲ್ಲಿಗೇ ಹೋಗಲಿ. ಬಿಜೆಪಿ ಭೀಷ್ಮ ಅಡ್ವಾಣಿಯವರ ಮೂಲವೇ ಪಾಕಿಸ್ತಾನ. ಆಮಂತ್ರಣವೇ ಇಲ್ಲದೇ ಪಕ್ಕದ ಮನೆಗೆ ಹೋಗುವಂತೆ ವೈರಿ ದೇಶಕ್ಕೆ ಹೋಗಿ ಬಂದವರು ನಿಮ್ಮ ವಿಶ್ವಗುರು ಮೋದಿ. ತಲೆಯಲ್ಲಿ ಮೆದುಳೇ ಇಲ್ಲದಂತೆ ಮಾಡನಾಡುವ, ಅರೆಹುಚ್ಚನಂತಾಗಿರುವ ಯತ್ನಾಳರಿಂದ ಪಾಠ ಕಲಿಯುವ ಕರ್ಮ ನನಗಿನ್ನೂ ಬಂದಿಲ್ಲ’ ಎಂದು ಗುಂಡೂರಾವ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಚುನಾವಣೆ ವೇಳೆ ನಾಯಕರು ತಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಬೇಕು. ಆದರೆ, ಯತ್ನಾಳ ತಮ್ಮ ಪಕ್ಷದಿಂದ ನಡೆದಿರುವ ಯಾವುದೇ ಪ್ರಗತಿ ತೋರಿಸಲು ಸಾಧ್ಯವಾಗದೇ ಸೋಲುವ ಭಯದಿಂದ ಜನರ ಗಮನ ಬೇರೆಡೆ ಸೆಳೆಯಲು ಧರ್ಮಗಳನ್ನು ಎತ್ತಿಕಟ್ಟಿ, ಕೋಮುಭಾವನೆ ಕೆರಳಿಸುವ ಹೇಳಿಕೆಗಳನ್ನು ನೀಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಹೇಳಿಕೆ ಯತ್ನಾಳ ಅವರ ಮಾನಸಿಕ ಸ್ಥಿಮಿತತೆಯನ್ನು ತೋರಿಸುತ್ತಿದೆ. ದೇಶದ ಅಭಿವೃದ್ಧಿ, ದೇಶ ಪ್ರೇಮದ ವಿಚಾರಗಳು ಇಂತಹ ಹುಚ್ಚರಿಗೆ ಹೇಗೆ ತಿಳಿಯುತ್ತದೆ ಅಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಯತ್ನಾಳ ಅಂತಹವರ ಹೇಳಿಕೆಗಳಿಂದ ಬೇಸತ್ತು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಜನತೆ ಬಿಜೆಪಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಸೋಲುವುದು ಖಚಿತ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ನಮ್ಮ ಕಾಂಗ್ರೆಸ್‌ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾರದೇ ಇಲ್ಲಸಲ್ಲದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೋದಿ ಅವಧಿಯಲ್ಲಿ ದೇಶದ ಮೇಲಿನ ಸಾಲ ದುಪ್ಪಟ್ಟಾಗಿದೆ. ಆಹಾರ ಪದಾರ್ಥಗಳು, ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಬೆಲೆ ಗಗನಕ್ಕೇರಿದೆ. ಡಾಲರ್‌ ಎದುರು ನಮ್ಮ ರೂಪಾಯಿ ಮೌಲ್ಯ ಕುಸಿಯುತ್ತಿಲೇ ಇದೆ, ದೇಶದಲ್ಲಿ ನಿರುದ್ಯೋಗ, ಬಡತನ ತಾಂಡವವಾಡುತ್ತಿದೆ. ಕನ್ನಡಿಗರ ಬೆವರ ಗಳಿಕೆಯ ತೆರಿಗೆ ಹಣವನ್ನು ಮೋದಿ ಕೊಟ್ಟಿಲ್ಲ, ಬರಗಾಲದಿಂದ ಬೇಯುತ್ತಿರುವ ರಾಜ್ಯದ ರೈತರಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ನಮ್ಮ ಜನಕ್ಕೆ ಅಕ್ಕಿ ಕೇಳಿದಾಗ ಕೊಡಲಿಲ್ಲ. ಮೋದಿ ವಿದೇಶಗಳ ಕಪ್ಪು ಹಣ ವಾಪಸ್‌ ತಂದು ದೇಶವಾಸಿಗಳ ಅಕೌಂಟ್‌ಗೆ ₹15 ಲಕ್ಷ ಹಾಕಿದ್ದಾರಾ? 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರಾ? ಚುನಾವಣಾ ಬಾಂಡ್‌ ಹೆಸರಲ್ಲಿ ದೇಶದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿರುವ ಬಗ್ಗೆ ಮಾತಾನಾಡಿ ಎಂದು ಯತ್ನಾಳಗೆ ಗುಂಡೂರಾವ್ ಸವಾಲು ಹಾಕಿದ್ದಾರೆ.

ಸನ್ಮಾನ್ಯ ಯತ್ನಾಳ ಅವರೇ, ನಿಮಗೆ ಸಮಯವಿದ್ದರೆ ಬನ್ನಿ, ನಿಮ್ಮ ವಿಶ್ವಗುರು ಮೋದಿಯವರ 10 ವರ್ಷಗಳ ಆಡಳಿತದ ಅವಾಂತರಗಳ ಬಗ್ಗೆ ಮಾತನಾಡೋಣ. ದೇಶದಲ್ಲಿ ಬಿಜೆಪಿ ಸರ್ಕಾರದಿಂದ ಆಗಿರುವ ಅನಾಹುತಗಳ ಬಗ್ಗೆ ಮಾತನಾಡೋಣ ಎಂದು ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.