ADVERTISEMENT

ಸೋಮಣ್ಣ ಪರ ಪ್ರಚಾರಕ್ಕೆ ಹೋಗಿದ್ದ ಪ್ರತಾಪ ಸಿಂಹರನ್ನು ತರಾಟೆಗೆ ತೆಗೆದುಕೊಂಡ ಜನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 6:38 IST
Last Updated 21 ಏಪ್ರಿಲ್ 2023, 6:38 IST
   

ಮೈಸೂರು: ವರುಣ ಕ್ಷೇತ್ರದ ‌ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ‌ ಸಿಂಹ ಅವರನ್ನು ಕುಪ್ಯ ಗ್ರಾಮದಲ್ಲಿ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸದರು ಗುರುವಾರ ಆ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಅವರನ್ನು ಗ್ರಾಮಸ್ಥರು ಪ್ರಶ್ನಿಸಿರುವುದು, ಉತ್ತರ ಕೊಡಲಾಗದೇ ಪ್ರತಾಪ ಸಿಂಹ ಕಕ್ಕಾಬಿಕ್ಕಿಯಾದದ್ದು ವಿಡಿಯೊದಲ್ಲಿದೆ. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾವು ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂದು ಬಿಜೆಪಿಯವರು ಹೇಳಿದ್ದೀರಿ. ಸಂವಿಧಾನ ರಚಿಸಿದ ಅಂಬೇಡ್ಕರ್ ಅಭಿಮಾನಿಗಳಾದ ನಾವು ನಿಮ್ಮನ್ನು ಹೇಗೆ ಬೆಂಬಲಿಸುವುದು? ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ನಿಮ್ಮದೇ ಸರ್ಕಾರವಿದ್ದಾಗ ರಸ್ತೆರಾಜ ಎಂದು ಬಿರುದು ಕೊಟ್ಟಿದ್ರಿ. ಈಗ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣವಾದ ಮೇಲೆ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದೀರಿ ಇದು ಸರಿಯೇ? ಎಂದೆಲ್ಲಾ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಸಂಸದ ವಿ.ಶ್ರೀನಿವಾಸ ಪ್ರಸಾದ್ ಈವರೆಗೂ ನಮ್ಮೂರಿಗೆ ಬಂದೇ ಇಲ್ಲ ಎಂದೂ ದೂರಿದ್ದಾರೆ.

ಸಿದ್ದರಾಮಯ್ಯ ಮೈಸೂರಿಗೆ ನೀಡಿರುವ ಕೊಡುಗೆ ಏನು ಎಂದೆಲ್ಲಾ ಕೇಳಿದ್ದೀರಿ. ಅವರ ಪಕ್ಕ ಹೋಗಿ ಕುಳಿತುಕೊಳ್ಳಿ ಆಗ ಎಲ್ಲವೂ ನಿಮಗೆ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಕಿ ಮೋದಿಯದು, ಚೀಲ ಸಿದ್ದರಾಮಯ್ಯ ಅವರದ್ದು ಎಂದು ಆರೋಪಿಸುತ್ತೀರಲ್ಲಾ ನೀವೇನು ಕೊಡುಗೆ ಕೊಟ್ಟಿದ್ದೀರಿ? ನಿಮ್ಮ ಸರ್ಕಾರದಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಕೊಡುತ್ತಿಲ್ಲವೇಕೆ? ಅಡುಗೆ ಅನಿಲ ಸಿಲಿಂಡರ್ ಬೆಲೆ ಇಷ್ಟೊಂದು ಜಾಸ್ತಿಯಾಗಿದೆಯಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಪ್ರತಾಪ ಉತ್ತರ ಕೊಡಲು ಪರದಾಡಿರುವುದು ವಿಡಿಯೊದಲ್ಲಿದೆ.

ನಂತರ ಬಿಜೆಪಿಯ ಕೆಲ ಕಾರ್ಯಕರ್ತರು, ಒಬ್ಬರು ಬಂದಿದಾರೆ ಅವರ ಮಾತು ಕೇಳಿಸಿಕೊಳ್ಳಿ. ನಿಮ್ಮವರು ಬಂದಾಗ ನಾವೂ ಹೀಗೇ ಮಾಡುತ್ತೀವಾ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಬೇಕಿದ್ದರೆ ಅವರು (ಕಾಂಗ್ರೆಸ್‌ನವರು) ಬಂದಾಗ ನೀವೂ ಕೇಳಿ ಎಂದು ಹೇಳಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.