ADVERTISEMENT

ಕಾಂಗ್ರೆಸ್ ಸೇರಿದ JDS ತಾಲ್ಲೂಕು ಅಧ್ಯಕ್ಷ: ಮನವೊಲಿಸಲು ಯತ್ನಿಸಿದ್ದ HDD ಪುತ್ರಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 13:36 IST
Last Updated 17 ಏಪ್ರಿಲ್ 2024, 13:36 IST
<div class="paragraphs"><p>ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಅವರನ್ನು&nbsp;ಡಿ.ಕೆ. ಸುರೇಶ್ ಅವರು ಕಾಂಗ್ರೆಸ್ ಧ್ವಜ ನೀಡಿ ಸ್ವಾಗತಿಸಿದರು</p></div>

ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಅವರನ್ನು ಡಿ.ಕೆ. ಸುರೇಶ್ ಅವರು ಕಾಂಗ್ರೆಸ್ ಧ್ವಜ ನೀಡಿ ಸ್ವಾಗತಿಸಿದರು

   

ಪ್ರಜಾವಾಣಿ ಚಿತ್ರ

ರಾಮನಗರ: ಲೋಕಸಭಾ ಚುನಾವಣೆಗೆ ದಿನಗಣನೆ ಬೆನ್ನಲ್ಲೇ, ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಬುಧವಾರ ಕಾಂಗ್ರೆಸ್ ಸೇರಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು, ಪಕ್ಷದ ಕಚೇರಿಯಲ್ಲಿ ರಾಜಶೇಖರ್ ಅವರನ್ನು ಬರಮಾಡಿಕೊಂಡರು.

ADVERTISEMENT

ಮೂವತ್ತೈದು ವರ್ಷಗಳಿಂದ ಪಕ್ಷದಲ್ಲಿದ್ದು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಲಿಂಗಾಯತ ಸಮುದಾಯದ ರಾಜಶೇಖರ್‌ ಅವರು, ಜೆಡಿಎಸ್ ನಾಯಕರಾದ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಕುಟುಂಬಕ್ಕೆ ಆಪ್ತರಾಗಿದ್ದರು.

ರಾಜಶೇಖರ್ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ತಾಲ್ಲೂಕಿನಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರ ಪುತ್ರಿ ಶೈಲಜಾ ಅವರು ಇತ್ತೀಚೆಗೆ ರಾಜಶೇಖರ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಪಕ್ಷ ತೊರೆಯದೆ ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ. ಸಿ.ಎನ್. ಮಂಜುನಾಥ್ ಅವರ ಗೆಲುವಿಗಾಗಿ ದುಡಿಯುವಂತೆ ಸೂಚಿಸಿದ್ದರು.

ಅದಾದ ನಾಲ್ಕು ದಿನಗಳಲ್ಲೇ ರಾಜಶೇಖರ್ ಅವರು ‘ತೆನೆ’ ಇಳಿಸಿ ‘ಕೈ’ ಹಿಡಿದಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ, ಡಿ.ಕೆ ಸಹೋದರರು ಕ್ಷೇತ್ರದ ಗ್ರಾಮ ಮಟ್ಟದಿಂದಿಡಿದು ಜಿಲ್ಲಾ ಮಟ್ಟದವರೆಗಿನ ಬಿಜೆಪಿ–ಜೆಡಿಎಸ್ ಮುಖಂಡರಿಗೆ ಗಾಳ ಹಾಕುತ್ತಾ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಸಾವಿರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌ ಅಪ್ಪಿಕೊಂಡಿದ್ದಾರೆ.

ಸೋಲಿನ ಭೀತಿಯಿಂದ ಐ.ಟಿ ದಾಳಿ: ಸುರೇಶ್

‘ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಐ.ಟಿ ಮತ್ತು ಇ.ಡಿ ದಾಳಿಯ ಅಸ್ತ್ರಗಳನ್ನು ಬಿಜೆಪಿ ನಮ್ಮ ವಿರುದ್ಧ ಪ್ರಯೋಗಿಸುತ್ತಿದೆ. ಪ್ರತಿ ಚುನಾವಣೆಯಲ್ಲೂ ನಡೆಯುವ ಇದು ನಮಗೆ ಹೊಸತಲ್ಲ. ಏನಾದರೂ ಮಾಡಿ ನಮ್ಮನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಬೇಕೆಂಬ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಬಿಜೆಪಿಗೆ ಈ ಅಸ್ತ್ರಗಳನ್ನು ಬಿಟ್ಟು ಬೇರೇನೂ ಇಲ್ಲ. ತಾಕತ್ತಿದ್ದರೆ ಪ್ರಧಾನಿ ಮೋದಿ ಅವರು ಬೆಲೆ ಏರಿಕೆ, ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಕೊಟ್ಟಿರುವ ಭರವಸೆಗಳ ಕುರಿತು ಮಾತನಾಡಲಿ’ ಎಂದು ತಮ್ಮ ಆಪ್ತರ ಮೇಲೆ ನಡೆದ ಐ.ಟಿ ದಾಳಿ ಕುರಿತ ಪ್ರಶ್ನೆಗೆ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದರು. 

ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ನಾಯಕತ್ವದ ಗುಣಗಳು ಒಂದು ಕುಟುಂಬಕ್ಕಾಗಿ ಸೀಮಿತವಾಗಿವೆ. ಕಾಂಗ್ರೆಸ್‌ ಜೊತೆ ಕೈ ಜೋಡಿಸಿದರೆ, ಅವರ ನಾಯಕತ್ವ ಗುಣ ಉಳಿಸಿಕೊಂಡು ಬೆಳೆಯಲು ಅವಕಾಶವಿದೆ
– ಡಿ.ಕೆ. ಸುರೇಶ್, ಕಾಂಗ್ರೆಸ್ ಅಭ್ಯರ್ಥಿ
35 ವರ್ಷಗಳಿಂದ ಒಂದೇ ಮನೆಯಲ್ಲಿದ್ದ ನನಗೆ ಕೆಲ ವಿಷಯಗಳಲ್ಲಿ ನೋವಾಗಿದೆ. ಹಲವು ಮುಖಂಡರಲ್ಲಿ ನೋವಿದ್ದರೂ ಸಹಿಸಿಕೊಂಡಿದ್ದಾರೆ. ಆದರೆ, ನನಗೆ ಸಾಕಾಗಿ ಕಾಂಗ್ರೆಸ್ ಸೇರಿದ್ದೇನೆ
– ರಾಜಶೇಖರ್, ಕಾಂಗ್ರೆಸ್ ಸೇರಿದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.