ADVERTISEMENT

ರಾಜೀವ್ ಗೌಡ ಜನರ ನಾಡಿಮಿಡಿತ ಬಲ್ಲವರು: ಡಿ.ಕೆ. ಶಿವಕುಮಾರ್

ಬಾಗಲಗುಂಟೆಯಲ್ಲಿ ಕಾಂಗ್ರೆಸ್ ನಾಯಕರ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 15:23 IST
Last Updated 22 ಏಪ್ರಿಲ್ 2024, 15:23 IST
ಬಾಗಲಗುಂಟೆಯಲ್ಲಿ ನಡೆದ ರೋಡ್ ಶೋದಲ್ಲಿ ಎಂ.ವಿ. ರಾಜೀವ್ ಗೌಡ ಪರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತಯಾಚಿಸಿದರು.
ಬಾಗಲಗುಂಟೆಯಲ್ಲಿ ನಡೆದ ರೋಡ್ ಶೋದಲ್ಲಿ ಎಂ.ವಿ. ರಾಜೀವ್ ಗೌಡ ಪರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತಯಾಚಿಸಿದರು.   

ಪೀಣ್ಯ ದಾಸರಹಳ್ಳಿ: ‘ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ಎಂ.ವಿ. ರಾಜೀವ್ ಗೌಡ, ಬಿಜೆಪಿ ಅಭ್ಯರ್ಥಿಯಂತೆ ಚಿಕ್ಕಮಗಳೂರಿನಿಂದ ವಲಸೆ ಬಂದವರಲ್ಲ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು, ಇಲ್ಲಿನ ಜನರ ನಾಡಿಮಿಡಿತ ಬಲ್ಲವರು’ ಎಂದು‌ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ಗ್ರಾಮದಲ್ಲಿ ನಡೆದ ರೋಡ್ ಶೋ ಉದ್ದೇಶಿಸಿ ಮಾತನಾಡಿದ ಅವರು, ‘ರಾಜೀವ್‌ ಗೌಡ ಅವರ ತಂದೆ ಮತ್ತು ದೊಡ್ಡಪ್ಪ ಕೂಡ ಇಲ್ಲಿನ ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದರು.

‘ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಐದು ಮಹತ್ವದ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಕಳೆದ 10 ತಿಂಗಳ ಅವಧಿಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಆರ್ಥಿಕ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸಿದೆ’ ಎಂದರು.

ADVERTISEMENT

‘ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಕಡುಬಡತನದಲ್ಲಿರುವ ಕುಟುಂಬಗಳಿಗೆ ತಲಾ ₹ 1 ಲಕ್ಷ ನೀಡುತ್ತೇವೆಂದು ಪಕ್ಷದ ನಾಯಕ ರಾಹುಲ್ ಗಾಂಧಿ  ಘೋಷಿಸಿದ್ದಾರೆ. ಜೊತೆಗೆ, ಯುವಕರಿಗಾಗಿ ‘ಯುವ ನ್ಯಾಯ್’, ಮಹಿಳೆಯರಿಗೆ ‘ನಾರಿ ನ್ಯಾಯ್', ರೈತರಿಗೆ ‘ಕಿಸಾನ್ ನ್ಯಾಯ್’, ಕಾರ್ಮಿಕರಿಗೆ ‘ಶ್ರಮಿಕ್ ನ್ಯಾಯ್’ ಮೂಲಕ ಐದು ಪ್ರಮುಖ ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಕೂಡ ತೀರ್ಮಾನಿಸಲಾಗಿದೆ. ಈಗಾಗಲೇ ಜಾರಿಯಲ್ಲಿರುವ ನಮ್ಮ ಐದು ಗ್ಯಾರಂಟಿಗಳ ಜೊತೆಗೆ ರಾಹುಲ್ ಗಾಂಧಿಯವರ ಗ್ಯಾರಂಟಿ ಯೋಜನೆಗಳು ಕೂಡ ಕರ್ನಾಟಕದ ಮನೆಮನೆಗಳಿಗೆ ತಲುಪಲಿವೆ’ ಎಂದರು.

ಬಾಗಲಗುಂಟೆಯಿಂದ ಆರಂಭವಾದ ರೋಡ್ ಶೋ ಮಲ್ಲಸಂದ್ರ, ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ 2ನೇ ಹಂತ ಸುಂಕದಕಟ್ಟೆವರೆಗೂ ನಡೆಯಿತು. ರೋಡ್‌ ಶೋಗೂ ಮೊದಲು ಬಾಗಲಗುಂಟೆ ಗ್ರಾಮ ದೇವತೆ ಮಾರಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಶಾಸಕ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜೀದ್, ಕಾಂಗ್ರೆಸ್ ನಾಯಕರಾದ ಅಕೈ ಪದ್ಮಸಾಲಿ, ಎಂ. ಕೀರ್ತನ್ ಕುಮಾರ್, ಕೆ. ನಾಗಭೂಷಣ್, ಹರೀಶ್ ಪಾರ್ಥ, ಬಿ.ಎಂ. ಜಗದೀಶ್, ಸಲೀಂ ಅಹಮದ್, ಹನುಮಂತರಾಜು, (ಎಬಿಬಿ) ಮಂಜುನಾಥ್ ಮುಂತಾದವರಿದ್ದರು.

ಬಾಗಲಗುಂಟೆಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಚುನಾವಣಾ ರೋಡ್ ಶೋ ನಲ್ಲಿ ಡಿ.ಕೆ. ಶಿವಕುಮಾರ್ ಭಾಗವಹಿಸಿ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್ ಗೌಡ ಅವರಿಗೆ ಮತಯಾಚಿಸಿದರು.ಮಾಜಿ ಶಾಸಕ ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜೀದ್ ಎಂ. ಕೀರ್ತನ್ ಕುಮಾರ್ ಕೆ. ನಾಗಭೂಷಣ್ ಹರೀಶ್ ಪಾರ್ಥ ಬಿ.ಎಂ. ಜಗದೀಶ್ ಸಲೀಂ ಅಹಮದ್ ಹನುಮಂತರಾಜು (ಎಬಿಬಿ) ಮಂಜುನಾಥ್ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.