ಚಾಮರಾಜನಗರ: ರಾಜ್ಯದ ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಕಣ್ಣೀರು ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ರಾಜ್ಯದಲ್ಲಿ ಬದಲಾವಣೆ ಕಾಣಲಿದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ಎಸ್.ನಾರಾಯಣ್ ಮಂಗಳವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷವು ಈಗಾಗಲೇ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಮಹಿಳೆಯರಿಗೆ ₹2000 ನಗದು ಹಣದ ಗ್ಯಾರಂಟಿ ನೀಡಿದೆ. ಇಂತಹ ನಿರ್ಧಾರವನ್ನು ಕಾಂಗ್ರೆಸ್‌ಗೆ ಮಾತ್ರ ತೆಗೆದುಕೊಳ್ಳಲು ಸಾಧ್ಯ. ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಗೊಂಡ ಬಳಿಕ, ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಜನರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಾರೆ’ ಎಂದರು.
‘ಪಕ್ಷವು ನನ್ನನ್ನು ಚಾಮರಾಜನಗರ ಜಿಲ್ಲಾ ಪ್ರಚಾರ ಸಮಿತಿಯ ಉಸ್ತುವಾರಿ ಜವಾಬ್ದಾರಿ ನೀಡಿದೆ. ನಾನು ಈವರೆಗೂ ಚಿತ್ರರಂಗಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದೆ. ರಾಜಕೀಯ ಪತ್ರಿಕಾಗೋಷ್ಠಿ ಹೊಸತು. ಚಾಮರಾಜನಗರದಲ್ಲಿ ಮೊದಲ ಬಾರಿಗೆ ಮಾತನಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದ್ದು, ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ’ ಎಂದರು.
‘ನಾಲ್ಕೂ ಕ್ಷೇತ್ರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ. ಚುನಾವಣೆ ಮುಗಿಯುವವರೆಗೆ ಇಲ್ಲೇ ಇರಲಿದ್ದೇನೆ. ಅಭ್ಯರ್ಥಿಗಳು, ಮುಖಂಡರೊಂದಿಗೆ ಮಾತುಕತೆ ನಡೆಸಿ ನಮ್ಮ ಪ್ರಚಾರದ ರೂಪುರೇಷೆ ಹೇಗಿರಬೇಕು ಎಂಬುದನ್ನು ಚರ್ಚಿಸುತ್ತೇನೆ. ಇಲ್ಲಿನ ವಾಸ್ತವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ಪಟ್ಟಿ ಮಾಡಿ ವರಿಷ್ಠರಿಗೆ ನೀಡಲಾಗುವುದು. ನಮ್ಮ ಸರ್ಕಾರ ಬಂದರೆ ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸಲಾಗುವುದು’ ಎಂದರು.
ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಎಸ್.ನಾರಾಯಣ್, ‘ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರೇ ಸ್ಟಾರ್‌ಗಳು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂತಹ ಸ್ಟಾರ್ ಪ್ರಚಾರಕರು ಇದ್ದಾರೆ. ಹಾಗಾಗಿ ಪಕ್ಷಕ್ಕೆ ಸ್ಟಾರ್ ಪ್ರಚಾರಕರ ಅಗತ್ಯವಿಲ್ಲ’ ಎಂದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಧುವಿನಹಳ್ಳಿ ಎಸ್.ಶಿವಕುಮಾರ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಸಂಯೋಜಕ ಆಲೂರು ಪ್ರದೀಪ್, ಸಹ ಸಂಯೋಜಕರಾದ ವಕೀಲ ಅರುಣ್ ಕುಮಾರ್, ಬಸಪ್ಪನಪಾಳ್ಯ ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.
ಪುಟ್ಟರಂಗಶೆಟ್ಟಿ ಪರ ಮತಯಾಚನೆ
ಪತ್ರಿಕಾಗೋಷ್ಠಿಯ ಬಳಿಕ ಎಸ್.ನಾರಾಯಣ್ ಅವರು ಚಾಮರಾಜನಗರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಪರವಾಗಿ ಮತಯಾಚನೆ ಮಾಡಿದರು.
ವೀರನಪುರ, ನಂಜೇದೇವನಪುರ, ತಮ್ಮಡಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ನಾರಾಯಣ್, ‘ಕಾಂಗ್ರೆಸ್ ಬಡವರ ಹಾಗೂ ದೀನದಲಿತರ ಪರವಾಗಿರುವಂತಹ ಪಕ್ಷ. ಪುಟ್ಟರಂಗಶೆಟ್ಟಿ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕ್ರಿಯಾಶೀಲ ವ್ಯಕ್ತಿಯಾಗಿ, ಸಮಯ ವ್ಯರ್ಥ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದಾರೆ. ಚುನಾವಣೆಯಲ್ಲಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಪರಿಶಿಷ್ಟ ಪಂಗಡದ ಘಟಕದ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸ ನಾಯಕ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.