ADVERTISEMENT

ಡಿಕೆಶಿ ಅವರನ್ನೇ ಮುಖ್ಯಮಂತ್ರಿ ಮಾಡಬೇಕು: ಒಕ್ಕಲಿಗ ಮಠಾಧೀಶರ ಆಗ್ರಹ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಶಿವಕುಮಾರ್ ಆಯ್ಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮೇ 2023, 13:17 IST
Last Updated 14 ಮೇ 2023, 13:17 IST
   

ಬೆಂಗಳೂರು: ‘ಪಕ್ಷವು ಸಂಕಷ್ಟದಲ್ಲಿದ್ದಾಗ ಹಗಲು ರಾತ್ರಿ ಎನ್ನದೇ ಸಂಘಟಿಸಿ ಅಧಿಕಾರಕ್ಕೆ ತಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು.

ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ನಡೆದ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆಯ ಬಳಿಕ, ‘ಚುನಾವಣೆಗಳಲ್ಲಿ ಕಾಂಗ್ರೆಸ್‌ ಬಹುಮತ ಪಡೆದಾಗ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುವ ಸಂಪ್ರದಾಯ ಇದೆ. ಅದನ್ನು ಈಗಲೂ ಪಾಲಿಸುವಂತೆ ಆಗಲಿ. ಆ ಸಂಪ್ರದಾಯ ಮುರಿಯಬಾರದು’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಮನವಿ ಮಾಡಿದರು.

ಹಲವು ವರ್ಷಗಳ ನಂತರ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಿಕ್ಕಿದೆ. ಸಂಕಷ್ಟದಲ್ಲಿದ್ದಾಗ ಶ್ರಮ ಹಾಕಿ ಪಕ್ಷವನ್ನು ಡಿಕೆಶಿ ಸಂಘಟಿಸಿದ್ದಾರೆ ಎಂದರು.

ADVERTISEMENT

‘ಶಿವಕುಮಾರ್ ಅವರು ಅತ್ಯಂತ ಬದ್ಧತೆ ಹಾಗೂ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅಧಿಕಾರ ಸಿಕ್ಕರೆ ಒಳ್ಳೆಯ ಆಡಳಿತ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಅವರೂ ಉತ್ತಮ ಆಡಳಿತ ಕೊಟ್ಟಿದ್ದಾರೆ. ಈಗ ಶಿವಕುಮಾರ್‌ಗೆ ಅವಕಾಶ ಸಿಗಲಿ’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.