ADVERTISEMENT

ಮೋದಿ ಸರ್ಕಾರದಿಂದ ಜನರಿಗೆ ಆದ ಅನ್ಯಾಯ ನಾವು ಸರಿ ಮಾಡಲಿದ್ದೇವೆ: ರಾಹುಲ್ ಗಾಂಧಿ

ವಿಜಯಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 9:30 IST
Last Updated 26 ಏಪ್ರಿಲ್ 2024, 9:30 IST
<div class="paragraphs"><p>ವಿಜಯಪುರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ಅವರ ಭಾಷಣವನ್ನು ಸಚಿವ ಎಂ.ಬಿ. ಪಾಟೀಲ ಅನುವಾದಿಸಿದರು.</p></div>

ವಿಜಯಪುರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ಅವರ ಭಾಷಣವನ್ನು ಸಚಿವ ಎಂ.ಬಿ. ಪಾಟೀಲ ಅನುವಾದಿಸಿದರು.

   

ವಿಜಯಪುರ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟ ಶ್ರಮಿಸಲಿದೆ. ದೇಶದ ಪ್ರತಿಯೊಬ್ಬ ಪ್ರಜೆಯ ಬದುಕನ್ನು ಸುಧಾರಿಸಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.

ವಿಜಯಪುರದಲ್ಲಿ ಶುಕ್ರವಾರ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ಪ್ರತಿಯೊಬ್ಬ ವ್ಯಕ್ತಿ ಮತ್ತು ಕುಟುಂಬವು ನೆಮ್ಮದಿಯಿಂದ ಬಾಳುವಂತಹ ವಾತಾವರಣವನ್ನು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟ ತರಲಿದೆ. ಜನರ ಸಮಸ್ಯೆ, ಸಂಕಷ್ಟ ನಿವಾರಣೆಯೇ ನಮ್ಮ ಆದ್ಯತೆ ಆಗಿದೆ’ ಎಂದರು.

ADVERTISEMENT

‘ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ದೇಶದ ಸಂವಿಧಾನವನ್ನು ಬದಲಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ನಾಶಪಡಿಸಲು ಬಯಸಿದ್ದಾರೆ. ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ಸಂವಿಧಾನದ ಆಶಯ, ಬಸವೇಶ್ವರರ ಚಿಂತನೆಯನ್ನು ಜಾರಿಗೊಳಿಸಲು ಒತ್ತು ನೀಡಲಿದೆ’ ಎಂದರು.

‘ನರೇಂದ್ರ ಮೋದಿ ತಮ್ಮ 10 ವರ್ಷದ ಆಡಳಿತ ಅವಧಿಯಲ್ಲಿ ಶ್ರೀಮಂತರನ್ನು ಹುಟ್ಟು ಹಾಕಿದರು ಮತ್ತು ಅವರ ಪರವಾಗಿಯೇ ಆಳ್ವಿಕೆ ನಡೆಸಿದರು. ಆದರೆ, ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ, ಬಡವರು, ದುರ್ಬಲ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರ ಬದುಕನ್ನು ಸುಧಾರಿಸಲಿದೆ’ ಎಂದರು.

‘ಮೋದಿ ಅವರು 20 ರಿಂದ 25 ಕೋಟ್ಯಾಧೀಶರನ್ನು ಹುಟ್ಟು ಹಾಕಿದರು. ಆದರೆ, ನಮ್ಮ ಸರ್ಕಾರವು ಆರ್ಥಿಕ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಹಂಚಿಕೆ ಮಾಡಿ, ಎಲ್ಲರನ್ನೂ ಆರ್ಥಿಕವಾಗಿ ಸ್ಥಿತಿವಂತರನ್ನು ಮಾಡಲು ಆದ್ಯತೆ ಕೊಡಲಿದೆ’ ಎಂದರು.

‘ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ ದೇಶದ ಬಡಕುಟುಂಬದ ಮಹಿಳೆಗೆ ವರ್ಷಕ್ಕೆ ₹ 1 ಲಕ್ಷ ಸಿಗಲಿದೆ. ಕರ್ನಾಟಕ ಸರ್ಕಾರವು ಬಡ ಮಹಿಳೆಯರಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ ₹ 24 ಸಾವಿರ ನೀಡುತ್ತಿದೆ. ನಮ್ಮ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಾಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ ₹ 1ಲಕ್ಷ ಸಿಗಲಿದೆ. ಕರ್ನಾಟಕ ರಾಜ್ಯದ ಮಹಿಳೆಯರಿಗೆ ಒಟ್ಟು ₹ 1.24 ಲಕ್ಷ ದೊರೆಯಲಿದೆ’ ಎಂದು ಅವರು ವಿವರಿಸಿದರು.

‘ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಲಿದೆ. ದೇಶದ ಆರ್ಥಿಕ ಸಂಪತ್ತನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಲು ಪ್ರಾಶಸ್ತ್ಯ ನೀಡಲಾಗುವುದು’ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಚಿವರಾದ ಎಂ.ಬಿ.‍ಪಾಟೀಲ, ಶಿವಾನಂದ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.