ADVERTISEMENT

LS Polls | ಮೋದಿ ಸರ್ಕಾರದ ಸಾಧನೆಯ ಬ್ರಹ್ಮಾಸ್ತ್ರ ನಮ್ಮಲ್ಲಿದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 8:29 IST
Last Updated 25 ಮಾರ್ಚ್ 2024, 8:29 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಸಾಧನೆಯ ಬ್ರಹ್ಮಾಸ್ತ್ರ ನಮ್ಮಲ್ಲಿದೆ. ಆ ಮೂಲಕ ಬಿಜೆಪಿ–ಜೆಡಿಎಸ್ ದಾಖಲೆಯ ಗೆಲುವು ಸಾಧಿಸಲು ಶ್ರಮಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಕರೆನೀಡಿದರು.

ಬಿಜೆಪಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕಾರಾತ್ಮಕ ಅಂಶಗಳನ್ನು ಜನರ ಮುಂದಿಡಿ. ಬಡವರು, ರೈತರು, ಮಹಿಳೆಯರು, ಯುವ ಜನತೆ ಎಂಬ 4 ವರ್ಗಗಳ ಜನರನ್ನು ನಾವು ತಲುಪಿ ಮೋದಿಯವರ ಸಾಧನೆಗಳನ್ನು ತಲುಪಿಸಬೇಕಿದೆ ಎಂದು ನುಡಿದರು.

ADVERTISEMENT

ಕರ್ನಾಟಕ ರಾಜ್ಯವು ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬುದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರುಜುವಾತು ಮಾಡಬೇಕಿದೆ; ಇದಕ್ಕಾಗಿ ನಮ್ಮೆಲ್ಲರ ಶ್ರಮ ಅತ್ಯಗತ್ಯ ಎಂದು ತಿಳಿಸಿದರು.

ಮುಂದಿನ ಲೋಕಸಭಾ ಚುನಾವಣೆಯು ಈ ದೇಶದ ಭವಿಷ್ಯವನ್ನು ರೂಪಿಸಲಿದೆ. ಬಿಜೆಪಿ- ಜೆಡಿಎಸ್ ಎರಡೂ ಪಕ್ಷಗಳು ಒಗ್ಗಟ್ಟಾಗಿ ಶ್ರಮ ಹಾಕಿ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುವ ಚುನಾವಣೆ ಇದು ಎಂದು ವಿಶ್ಲೇಷಿಸಿದರು.

ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಈ ದೇಶದ ವಿರೋಧ ಪಕ್ಷಗಳು ಈಗಾಗಲೇ ತೀರ್ಮಾನ ಮಾಡಿವೆ. ಆದರೂ, ನಾವು ಚುನಾವಣೆಯನ್ನು ಸವಾಲಾಗಿ, ಗಂಭೀರವಾಗಿ ಸ್ವೀಕರಿಸಬೇಕು ಎಂದು ಅವರು ತಿಳಿಸಿದರು.

ಎಲ್ಲ 58 ಸಾವಿರ ಬೂತ್‍ಗಳನ್ನು ನೇರವಾಗಿ ತಲುಪಬೇಕಿದೆ. ನರೇಂದ್ರ ಮೋದಿಯವರ ಜನಪ್ರಿಯತೆ, ಜನಪರ ಯೋಜನೆಗಳನ್ನು ಮತವಾಗಿ ಪರಿವರ್ತಿಸುವ ಸವಾಲನ್ನು ಸ್ವೀಕರಿಸಿ ಎಂದು ಅವರು ಮನವಿ ಮಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅಧಿಕಾರ ಪಡೆದಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ತಪ್ಪು ನರೇಟಿವ್ ಅನ್ನು ಕಾಂಗ್ರೆಸ್ ಪಕ್ಷ ಮುಂದಿಟ್ಟಿತ್ತು ಎಂದು ವಿಶ್ಲೇಷಿಸಿದರು.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆಯ ಸವಾಲನ್ನು ನಾವು ಸ್ವೀಕರಿಸಿ ಯಶಸ್ವಿಯಾಗಬೇಕು ಎಂದು ಅವರು ಸಲಹೆ ನೀಡಿದರು. ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಪ್ರೀತಮ್ ಗೌಡ, ರಾಜ್ಯ ಉಪಾಧ್ಯಕ್ಷೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯಕ್, ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.