ADVERTISEMENT

ಬಿಜೆಪಿ ತೆರಿಗೆ ಕಟ್ಟದ್ದಕ್ಕೆ ಯಾರು ಹೊಣೆ? ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 14:49 IST
Last Updated 12 ಏಪ್ರಿಲ್ 2024, 14:49 IST
<div class="paragraphs"><p>ಸಿದ್ದರಾಮಯ್ಯ ಪ್ರಶ್ನೆ</p></div>

ಸಿದ್ದರಾಮಯ್ಯ ಪ್ರಶ್ನೆ

   

ನಂಜನಗೂಡು: ‘ಭ್ರಷ್ಟರನ್ನು ಜೈಲಿಗೆ ಕಳುಹಿಸುವುದೇ ನನ್ನ ಕರ್ತವ್ಯ ಎನ್ನುವ ನರೇಂದ್ರ ಮೋದಿ, ತಮ್ಮದೇ ಪಕ್ಷವು ಬಾಂಡ್ ಮೂಲಕ ಸಂಗ್ರಹಿಸಿರುವ ₹7600 ಕೋಟಿಗೆ ಯಾಕೆ ತೆರಿಗೆ ಕಟ್ಟಿಲ್ಲ. ಇದನ್ನು ಯಾಕೆ ಐ.ಟಿ. ಇ.ಡಿ. ಪ್ರಶ್ನಿಸಿಲ್ಲ? ಇದಕ್ಕೆ ಯಾರನ್ನು ಜೈಲಿಗೆ ಕಳುಹಿಸಬೇಕು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿಗೆ ಸಮೀಪದ ಕಳಲೆ ಗೇಟ್‌ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನು ಸಾಕ್ಷ್ಯ ಇಲ್ಲದಿದ್ದರೂ ಜೈಲಿಗೆ ತಳ್ಳಿದ್ದಾರೆ. ಅದೇ ಐ.ಟಿ. ಇ.ಡಿ.ಯಂತಹ ಸಂಸ್ಥೆಗಳು ಬಿಜೆಪಿ ನಾಯಕರನ್ನು ಯಾಕೆ ಪ್ರಶ್ನಿಸುವುದಿಲ್ಲ’ ಎಂದು ಕೇಳಿದರು.

ADVERTISEMENT

ರಾಜಕೀಯ ನಿವೃತ್ತಿ: ಬಿಜೆಪಿಯವರು ಮಾತೆತ್ತಿದರೆ ದೇಶಭಕ್ತಿ ಎನ್ನುತ್ತಾರೆ. ಮೋದಿ, ಅಡ್ವಾಣಿ ಎಂದಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರ? ಆರ್‌ಎಸ್‌ಎಸ್‌, ಜನಸಂಘದ ಯಾರಾದರೂ ಒಬ್ಬ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮನಾಗಿದ್ದನ್ನು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

‘ ಬಿಜೆಪಿ ರಾಜ್ಯದಲ್ಲಿ ಎಂದು ಪೂರ್ಣ ಜನಾಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ಮುಂಬಾಗಿಲ ರಾಜಕಾರಣ ಗೊತ್ತಿಲ್ಲ. ಆಪರೇಷನ್ ಕಮಲ ಹೆಸರು ಬಂದಿದ್ದೇ ಯಡಿಯೂರಪ್ಪ ಅವರಿಂದ’ ಎಂದು ಲೇವಡಿ ಮಾಡಿದರು. ‘ ಸಿದ್ದರಾಮಯ್ಯ ರಿಂದ ಸಮ್ಮಿಶ್ರ ಸರ್ಕಾರ ಬಿತ್ತು ಎನ್ನುತ್ತಿದ್ದ‌ ಕುಮಾರಸ್ವಾಮಿ ಈಗ ಡಿಕೆಶಿಯತ್ತ ಬೆರಳು ಮಾಡುತ್ತಿದ್ದಾರೆ. ಆದರೆ ನಿಜವಾಗಿ‌ ಸರ್ಕಾರ ಬೀಳಿಸಿದ್ದು ಯಡಿಯೂರಪ್ಪ’ ಎಂದರು.

ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್‌ ಜೊತೆಗಿದ್ದರು.

ಅಭ್ಯರ್ಥಿ ಹೆಸರು ಹೇಳಿದರೆ ತಪ್ಪಲ್ಲ!

ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರಿಗೆ ಮತ ನೀಡುವಂತೆ ಕೋರಿದರು. ಅಲ್ಲೇ ಇದ್ದ ಕೆಲವರು, ‘ಅಭ್ಯರ್ಥಿ ಹೆಸರು ಹೇಳಬೇಡಿ. ಇದೆಲ್ಲ ಅವರ ಲೆಕ್ಕಕ್ಕೆ ಹೋಗುತ್ತೆ’ ಎಂದು ಪಿಸುಮಾತಿನಲ್ಲಿ ನೆನಪಿಸಿದರು. ಅವರನ್ನು ಗದರಿದ ಸಿದ್ದರಾಮಯ್ಯ ‘ಅಭ್ಯರ್ಥಿ ವೇದಿಕೆ ಮೇಲೆ ಇರುವಂತಿಲ್ಲ. ಆದರೆ ಅವರ ಹೆಸರು ಹೇಳಬೇಡಿ ಎಂದೇನು ನಿರ್ಬಂಧ ಇಲ್ಲ. ರಾಜ್ಯದ ಮುಖ್ಯಮಂತ್ರಿ ಆಗಿ ಸುನಿಲ್‌ ಸೇರಿದಂತೆ ಪಕ್ಷದ 28 ಅಭ್ಯರ್ಥಿಗಳ ಹೆಸರಿನಲ್ಲಿ ಮತಯಾಚನೆ ಮಾಡುವ ಅಧಿಕಾರ, ಅವಕಾಶ ನನಗೆ ಇದೆ’ ಎಂದು ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.