ADVERTISEMENT

ತುಮಕೂರು: ಒಲ್ಲದ ಮನಸ್ಸಿನಿಂದ ಮೈತ್ರಿ ಆಭ್ಯರ್ಥಿ ಗೆಲುವಿಗೆ ಕೆ.ಎನ್.ರಾಜಣ್ಣ ಕರೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 10:06 IST
Last Updated 8 ಏಪ್ರಿಲ್ 2019, 10:06 IST
ಸಭೆಯಲ್ಲಿ ಕೆ.ಎನ್. ರಾಜಣ್ಣ ಮಾತನಾಡಿದರು
ಸಭೆಯಲ್ಲಿ ಕೆ.ಎನ್. ರಾಜಣ್ಣ ಮಾತನಾಡಿದರು   

ಮಧುಗಿರಿ: ತುಮಕೂರು ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಲು ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಕರೆದಿದ್ದ ಸಭೆಯು ಗೊಂದಲದ ಗೂಡಾಯಿತು.

ಹೈಕಮಾಂಡ್ ನಿರ್ದೇಶ‌ನ ನೀಡಿದೆ. ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ರಾಜ್ಯ ಹಿರಿಯ ಮುಖಂಡರು ಮೈತ್ರಿ ಅಭ್ಯರ್ಥಿ ಎಚ್.ಡಿ. ದೇವೇಗೌಡ ಅವರಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿರುವುದು, ಮೈತ್ರಿ ಅಭ್ಯರ್ಥಿ ದೇವೇಗೌಡರು ಸ್ಪರ್ಧಿಸಿರುವುದಕ್ಕೆ ನನಗೂ ವೈಯಕ್ತಿಕವಾಗಿ ಸಾಕಷ್ಟು ಬೇಸರ ಇದೆ ಎಂದರು.

ADVERTISEMENT

ಇಡೀ ದೇಶಕ್ಕಾಗಿ, ಹಿತಕ್ಕಾಗಿ ಶ್ರಮಿಸುತ್ತೇನೆ ಎಂದು ದೇವೇಗೌಡರು ಹೇಳ್ತಾರೆ. ಆದರೆ, ತುಮಕೂರು ಜಿಲ್ಲೆಗೆ ಹೆಮಾವತಿ ನೀರು ಹರಿಸಲಿಲ್ಲ. ನೀರಿಗಾಗಿ ಈಗಲೂ ಹೋರಾಟ ಮಾಡಬೇಕಾಗಿದೆ. ಡಾ.ಜಿ.ಪರಮೇಶ್ವರ ಅವರು ಮೈತ್ರಿ ಅಭ್ಯರ್ಥಿ ಆಯ್ಕೆಗೆ ಮನವಿ ಮಾಡುತ್ತಾರೆ. ಹತ್ತು ಓಟು ಹಾಕಿಸುವಷ್ಟು ಶಕ್ತಿ ಇಲ್ಲ. ಜಿರೊ ಟ್ರಾಫಿಕ್ ನಲ್ಲಿ ಓಡಾಡುವ ಪರಮೇಶ್ವರ್‌ಗೆ ಜನಸಂಪರ್ಕ ಕ್ಷೇತ್ರದಲ್ಲಿ ಇಲ್ಲ. ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಓಡಾಡದೇ ಇದ್ದಿದ್ದರೆ ಪರಮೇಶ್ವರ ಗೆಲುವು ಕಷ್ಟ ಇತ್ತು. ನಾನು ಮಧುಗಿರಿಯಲ್ಲಿ ಸೋತರೂ ಚಿಂತೆ ಇಲ್ಲ ಎಂದು ಪರಮೇಶ್ವರ ಆಯ್ಕೆಗೆ ಕೆಲಸ ಮಾಡಿದ್ದೆ ಎಂದು ಕಾರ್ಯಕರ್ತರು, ಮುಖಂಡರ ಮುಂದೆ ರಾಜಣ್ಣ ಹೇಳಿಕೊಂಡರು.

ಆದರೆ, ಈಗ ಪಕ್ಷದ ಮುಖಂಡರು, ಹೈಕಮಾಂಡ್ ಆದೇಶ ಪಾಲಿಸಲೇಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬಡವರ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯ, ತಳ ಸಮುದಾಯಗಳ ಹಿತ ದೃಷ್ಡಿಯುಳ್ಳ ಪಕ್ಷ. ಹೀಗಾಗಿ ಪಕ್ಷದ ಧ್ಯೇಯಕ್ಕೆ ಬೆಲೆ ಕೊಡಬೇಕಾಗಿದೆ ಎಂದರು.

ಆಕ್ಷೇಪ

ರಾಜಣ್ಣ ಅವರ ಮಾತು ಕೇಳಿದ ಕೆಲ ಕಾಂಗ್ರೆಸ್ ಮುಖಂಡರು ರಾಜಣ್ಣ ವಿರುದ್ಧವೇ ಹರಿಹಾಯ್ದರು. ನೀವು ಏನೇ ಹೇಳಬಹುದು. ಪ್ರತಿ ಚುನಾವಣೆಯಲ್ಲಿ ಹಾವು ಮುಂಗುಸಿಯಂತೆಜೆಡಿಎಸ್‌ನವರೊಂದಿಗೆ ಕಿತ್ತಾಡಿದ್ದೇವೆ. ಈಗ ಅವರೊಂದಿಗೆ ಕೆಲಸ ಮಾಡುವುದು ಕಷ್ಟ ಎಂದರು.

ರಾಜಣ್ಣ ಪ್ರತಿಕ್ರಿಯಿಸಿ, ನಾನೇನು ಹೇಳುತ್ತೇನೆ. ಹಾಗೆಯೇ ಮಾಡಿ ಎಂದು ಹೇಳಿಲ್ಲ. ನಿರ್ಧಾರ ನಿಮಗೆ ಬಿಟ್ಟಿದ್ದು. ನಾನು ಪಕ್ಷದ ವರಿಷ್ಠರ ಸೂಚನೆಯನ್ನು ಗಮನಕ್ಕೆ ತಂದಿದ್ದೇನೆ ಎಂದರು.

ಏಪ್ರಿಲ್ 10ರಂದು ಸಭೆ

ಏಪ್ರಿಲ್ 10ರಂದು ದೇವೇಗೌಡರು ಮತ್ತು ಸಿದ್ದರಾಮಯ್ಯ ಪ್ರಚಾರ ಸಭೆ ನಡೆಸಲಿದ್ದಾರೆ. ಅದರಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ನಮ್ಮ ನಾಯಕರು: ನೀವೇ ನನಗೆ ಶಕ್ತಿ. ನಮಗೆ ಸಿದ್ದರಾಮಯ್ಯ ಅವರೇ ನಾಯಕ ಎಂದು ರಾಜಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.