ADVERTISEMENT

ವಿರೋಧಿಗಳ ಒಳಜಗಳ ನಮಗೆ ಲಾಭ: ಶಾಸಕ ಸಿದ್ದು ಸವದಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 14:31 IST
Last Updated 30 ಏಪ್ರಿಲ್ 2019, 14:31 IST
 ಸಿದ್ದು ಸವದಿ
ಸಿದ್ದು ಸವದಿ    

ಬಾಗಲಕೋಟೆ: ‘ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಒಬ್ಬರ ಮುಖ ಮತ್ತೊಬ್ಬರು ನೋಡದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಪಕ್ಷದ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಾಸಕ ಸಿದ್ದು ಸವದಿ ಹೇಳಿದರು.

‘ಮೈತ್ರಿ ಪಕ್ಷಗಳ ನಾಯಕರು ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಪಠಿಸಿದರೂ ಒಳಗೊಳಗೆ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಿದ್ದಾರೆ. ಇದರ ಲಾಭ ಖಂಡಿತವಾಗಿಯೂ ಪಕ್ಷದ ಅಭ್ಯರ್ಥಿಗೆ ಸಿಗಲಿದೆ. ಗದ್ದಿಗೌಡರ 2 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ’ ಎಂದರು.

‘ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿರುವ ಅನ್ಯಾಯದ ಮಾಡಿವೆ.ಬಾಗಲಕೋಟೆ–ಕುಡಚಿ ರೈಲು ಮಾರ್ಗ ವಿಳಂಬವಾಗಲು ರಾಜ್ಯ ಸರ್ಕಾರದ ಅಸಹಕಾರವೇ ಕಾರಣ. ಈ ಬಗ್ಗೆ ಪ್ರಚಾರದ ವೇಳೆ ಜನರ ಗಮನ ಸೆಳೆಯಲಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಚುನಾವಣೆ ಘೋಷಣೆಯಾದ ದಿನದಂದಲೂ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ. ಜಿಲ್ಲೆಯ ಚುನಾವಣೆ ಉಸ್ತುವಾರಿ ಹೊಂದಿರುವ ಶಾಸಕ ಕೆ.ಎಸ್.ಈಶ್ವರಪ್ಪ ಒಂದು ವಾರ ಕಾಲ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿ ಕ್ಷೇತ್ರವಾರು ಸಭೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಕೆಲಸಕ್ಕೆ ಹಚ್ಚಿದ್ದಾರೆ’ ಎಂದರು.

‘ಉತ್ತರ ಕರ್ನಾಟಕ ಭಾಗದ ಗುತ್ತಿಗೆದಾರರು ಕೆಲಸ ಮುಗಿಸಿ ಎರಡು ವರ್ಷ ಆದರೂ ಅವರಿಗೆ ಇನ್ನೂ ಬಿಲ್ ಕೊಟ್ಟಿಲ್ಲ. ಆದರೆ ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಹಾಸನ, ತುಮಕೂರು ಭಾಗದಲ್ಲಿ ಕೆಲಸ ಆರಂಭಕ್ಕೆ ಮುನ್ನವೇ ಬಿಲ್ ಕೊಡಲಾಗಿದೆ. ಈ ಹಣವನ್ನು ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ ಸಿದ್ದು ಸವದಿ, ‘ಈ ಅಕ್ರಮದ ಅರಿವು ಆಗಿಯೇ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ನಾಯಕರು, ಕೇಂದ್ರ ಸಚಿವರ ಮನೆಗಳ ಮೇಲೂ ಆದಾಯ ತೆರಿಗೆ ದಾಳಿ ನಡೆಸಿದೆ’ ಎಂದರು.

ಶಾಸಕ ವೀರಣ್ಣ ಚರಂತಿಮಠ, ಪಕ್ಷದ ಮುಖಂಡರಾದ ರಾಜು ರೇವಣಕರ, ಮಹಾಂತೇಶ ಕೋಲಕಾರ, ಬಾಬಾಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.

ಇಬ್ರಾಹಿಂ ಹೇಳಿಕೆ: ಕಾರಜೋಳ ಖಂಡನೆ

’ಪ್ರಧಾನಿ ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಲು ಶಾಸಕ ವೀರಣ್ಣ ಚರಂತಿಮಠ ಗುದ್ದಲಿ ಪೂಜೆ ನೆರವೇರಿಸಿದರೆ. ಮೋದಿ ದಫನ್ ಮಾಡಲು ಚರಂತಿಮಠ ಪೂಜೆ ಮಾಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಅದು ಖಂಡನೀಯ’ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.

‘ಈ ಮಾತು ಇಬ್ರಾಹಿಂ ಒಬ್ಬ ಸಂಸ್ಕೃತಿ ಹೀನ ಮನುಷ್ಯ ಎಂಬುದನ್ನು ಸಾಬೀತು ಮಾಡುತ್ತದೆ. ಪ್ರಚಾರ ಗಿಟ್ಟಿಸಲು ಇಬ್ರಾಹಿಂ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿರುವುದು ಅತ್ಯಂತ ಅಪಾಯಕಾರಿ ಸಂಗತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ಸಂಸದ ಪಿ.ಸಿ.ಗದ್ದಿಗೌಡರ ಅತ್ಯಂತ ಪ್ರಾಮಾಣಿಕ ಹಾಗೂ ಸಜ್ಜನ ಮನುಷ್ಯ. ಕಳೆದ ಬಾರಿಗಿಂತ ಈ ಬಾರಿ ಅವರ ಆಸ್ತಿಯ ಪ್ರಮಾಣ ಕಡಿಮೆಯಾಗಿರುವುದೇ ಇದಕ್ಕೆ ಸಾಕ್ಷಿ.

–ಸಿದ್ದು ಸವದಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.