ADVERTISEMENT

ನಾಮಪತ್ರ ಸಲ್ಲಿಕೆ: ಶೋಭಾ, ಪ್ರಕಾಶ್‌, ಪ್ರಜ್ವಲ್ ಆಸ್ತಿ ವಿವರ 

ಲೋಕಸಭಾ ಚುನಾವಣೆ 2019

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 4:56 IST
Last Updated 23 ಮಾರ್ಚ್ 2019, 4:56 IST
   

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ (ಪಕ್ಷೇತರ), ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಆರ್‌.ಪ್ರಜ್ವಲ್ ನಾಮಪತ್ರ ಸಲ್ಲಿಸಿದ್ದು, ಅವರ ಒಟ್ಟುಆಸ್ತಿ ವಿವರ ಇಂತಿದೆ.

ಪ್ರಕಾಶ್ ರಾಜ್ ₹ 31 ಕೋಟಿ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಚಿತ್ರನಟ ಪ್ರಕಾಶ್ ರಾಜ್ ₹26.59 ಕೋಟಿ ಸ್ಥಿರಾಸ್ತಿ ಮತ್ತು ₹4.93 ಕೋಟಿ ಚರಾಸ್ತಿ ಹೊಂದಿದ್ದು, ಕಳೆದ ವರ್ಷ ₹2.40 ಕೋಟಿ ಆದಾಯ ಸಂಪಾದಿಸಿದ್ದಾರೆ.

₹25,000 ನಗದು, ವಿವಿಧ ಬ್ಯಾಂಕ್‌ ಹಾಗೂ ಖಾಸಗಿ ಹೂಡಿಕೆ ‌ಸೇರಿ ₹2.94 ಕೋಟಿ ಇದೆ. ₹1.88 ಕೋಟಿ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ.

ADVERTISEMENT

₹5.59 ಕೋಟಿ ಮೌಲ್ಯದ 30 ಎಕರೆಗೂ ಹೆಚ್ಚು ಕೃಷಿ ಜಮೀನು, ₹5 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ₹3.83 ಕೋಟಿ ಸಾಲ, ವ್ಯಾಜ್ಯದಲ್ಲಿರುವ ₹4.25 ಕೋಟಿ ಸಾಲ ಇದೆ.

ಪತ್ನಿ ರಶ್ಮಿ ವರ್ಮಾ, 20.46 ಲಕ್ಷ ಮೌಲ್ಯದ ಚರಾಸ್ತಿ, 35 ಲಕ್ಷ ಮೌಲ್ಯದ ಸ್ಥಿರಾಸ್ತಿ,18 ಲಕ್ಷ ಮೌಲ್ಯದ ಆಭರಣಗಳಿವೆ.

ಚಿಕ್ಕಮಗಳೂರಿನಲ್ಲಿ ಅಕ್ರಮ ಕೂಟ ರಚಿಸಿಕೊಂಡ ಶಾಂತಿ ಭಂಗ ಉಂಟು ಮಾಡಿದ ಆರೋಪದಲ್ಲಿ ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

***
ಕರಂದ್ಲಾಜೆ ₹ 10 .48 ಕೋಟಿ
ಉಡುಪಿ:
ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ₹7.38 ಕೋಟಿ ಮೌಲ್ಯದ ಚರಾಸ್ತಿ, ₹3.10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ ₹4.99 ಕೋಟಿ ಸಾಲ ಹೊಂದಿದ್ದಾರೆ.

ಕೈನಲ್ಲಿ ₹1.29 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ ₹71.92 ಲಕ್ಷ ಠೇವಣಿ, ಹಾಗೂ ₹4.65 ಲಕ್ಷ ಸ್ಥಿರ ಠೇವಣಿ ಹೊಂದಿದ್ದಾರೆ.

1 ಕೆ.ಜಿ. ಚಿನ್ನದ ಬಿಸ್ಕೆಟ್‌, 650 ಗ್ರಾಂ ಚಿನ್ನದ ಆಭರಣ, 1 ಕೆ.ಜಿ. 620 ಗ್ರಾಂ ಬೆಳ್ಳಿ ಹಾಗೂ ಟೊಯೊಟಾ ಇನ್ನೋವಾ ಕಾರು, ಹೋಂಡಾ ಆ್ಯಕ್ಟಿವಾ ಸ್ಕೂಟರ್ ಹೊಂದಿದ್ದಾರೆ. ಬಿ.ಎ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್‌ಡಬ್ಲ್ಯೂ ಹಾಗೂ ಮೈಸೂರು ಮುಕ್ತ ವಿವಿಯಲ್ಲಿ ಎಂಎ (ಸೋಷಾಲಜಿ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶೋಭಾ ಅವರ ವಿರುದ್ಧ (ಕ್ರೈಂ ನಂಬರ್, 627/17) ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಇದೆ ಎಂಬ ಮಾಹಿತಿ ನೀಡಲಾಗಿದೆ.

***
ಪ್ರಜ್ವಲ್ ₹ 9 .78 ಕೋಟಿ
ಹಾಸನ:
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್‌.ಪ್ರಜ್ವಲ್ ಅವರು ತಮ್ಮ ಸ್ಥಿರ ಹಾಗೂ ಚರಾಸ್ತಿಗಳ ಒಟ್ಟು ಮೌಲ್ಯ ₹9.78 ಕೋಟಿ.

₹15.58 ಲಕ್ಷ ನಗದು, 1.100 ಕೆ.ಜಿ ಚಿನ್ನಾಭರಣ, 23 ಕೆ.ಜಿ ಬೆಳ್ಳಿ ಆಭರಣ, ₹4.5 ಲಕ್ಷ ಮೌಲ್ಯದ 18 ಹಸುಗಳು, ₹30 ಸಾವಿರ ಮೌಲ್ಯದ ಒಂದು ಜೊತೆ ಎತ್ತು, ಒಂದು ಟ್ರಾಕ್ಟರ್ ಸೇರಿ ₹1,64,86,632 ಚರಾಸ್ತಿ ಹಾಗೂ ₹4,89,15,029 ಸ್ಥಿರಾಸ್ತಿ ಇದೆ.

₹3.72 ಕೋಟಿ ಸಾಲದ ಹೊರೆ ಇದೆ ಎಂದು ಮಾಹಿತಿ ನೀಡಿದ್ದಾರೆ. ತಮ್ಮ ತಂದೆ ಎಚ್.ಡಿ.ರೇವಣ್ಣ ಬಳಿ ₹1.26 ಕೋಟಿ ಸಾಲ, ತಾಯಿ ಭವಾನಿ ಬಳಿ ₹43.75 ಲಕ್ಷ, ಅತ್ತೆ ಅನಸೂಯಾ ಮಂಜುನಾಥ್ ಬಳಿ ₹22 ಲಕ್ಷ ಸಾಲ ಪಡೆದಿದ್ದಾರೆ.

ಅಲ್ಲದೇ, ಅಣ್ಣ ಸೂರಜ್‌ಗೆ ₹37.20 ಲಕ್ಷ, ಅಜ್ಜಿ ಚೆನ್ನಮ್ಮಗೆ ₹23 ಲಕ್ಷ, ಇತರೆ ₹25 ಲಕ್ಷ ಸಾಲ ನೀಡಿದ್ದಾರೆ. ₹91.10 ಲಕ್ಷ ವಿವಿಧೆಡೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ₹11 ಲಕ್ಷ ಠೇವಣಿ ಇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.