ADVERTISEMENT

ನಾಯ್ಡು–ಜಗನ್‌ ಅಬ್ಬರದಲ್ಲಿ ಮತದಾರ ಮೂಕ

ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳ ಮೇಲಾಟ

ಜೆ.ಬಿ.ಎಸ್‌ ಉಮಾನಾದ್‌
Published 9 ಏಪ್ರಿಲ್ 2019, 19:59 IST
Last Updated 9 ಏಪ್ರಿಲ್ 2019, 19:59 IST
ಸಮಾವೇಶದಲ್ಲಿ ಟಿಡಿಪಿ ಕಾರ್ಯಕರ್ತರು
ಸಮಾವೇಶದಲ್ಲಿ ಟಿಡಿಪಿ ಕಾರ್ಯಕರ್ತರು   

ಅಮರಾವತಿ: ಇಷ್ಟೊಂದು ತೀವ್ರವಾದ ಹಣಾಹಣಿ ಆಂಧ್ರ ಪ್ರದೇಶದ ಚುನಾವಣೆಯಲ್ಲಿ ಯಾವತ್ತೂ ಇರಲಿಲ್ಲ. ಆಡಳಿತಾರೂಢ ತೆಲುಗು ದೇಶಂ ಪಾರ್ಟಿ ಮತ್ತು ಮುಖ್ಯ ವಿರೋಧ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಇನ್ನಿಲ್ಲದ ಮಟ್ಟದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿವೆ. ಈ ಅಬ್ಬರದಲ್ಲಿ ಮತದಾರ ಮೂಕ ಪ್ರೇಕ್ಷಕನಾಗಿದ್ದಾನೆ. ಎರಡು ಪ್ರಮುಖ ಪಕ್ಷಗಳ ನಾಯಕರ ನಡುವಣ ಆರೋಪ–ಪ್ರತ್ಯಾರೋಪಗಳಲ್ಲಿ ನಿಜವಾದ ಸಮಸ್ಯೆಗಳು ಮರೆಗೆ ಸರಿದಿವೆ.

ಲೋಕಸಭೆಯ 25 ಮತ್ತು ವಿಧಾನಸಭೆಯ 175 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಟಿಡಿಪಿ, ವೈಎಸ್‌ಆರ್‌ಪಿ, ಕಾಂಗ್ರೆಸ್‌, ಬಿಜೆಪಿ ಮತ್ತು ಜನಸೇನಾ–ಬಿಎಸ್‌ಪಿ–ಎಡಪಕ್ಷಗಳ ಮೈತ್ರಿಕೂಟವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.

ತೆಲಂಗಾಣ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಟಿಡಿಪಿ, ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಎರಡೂ ಪಕ್ಷಗಳು ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತಿವೆ. 2014ರ ಚುನಾವಣೆಯಲ್ಲಿ ಟಿಡಿಪಿ ಜತೆಗಿದ್ದ ಬಿಜೆಪಿ ಕೂಡ ಈ ಬಾರಿ ಏಕಾಂಗಿಯಾಗಿಯೇ ಕಣದಲ್ಲಿದೆ.

ADVERTISEMENT

ನಾಯ್ಡು ಕಳವಳ:ಚುನಾವಣಾ ಆಯೋಗವು ಬಿಜೆಪಿ ಜತೆಗೆ ಶಾಮೀಲಾಗಿದೆ ಎಂದು ಚುನಾವಣಾ ದಿನಾಂಕ ಪ್ರಕಟ ಆದಾಗಿನಿಂದ ಟಿಡಿಪಿ ಅನುಮಾನ ವ್ಯಕ್ತಪಡಿಸುತ್ತಲೇ ಇದೆ. ಆಂಧ್ರ ಪ್ರದೇಶದಲ್ಲಿ ಮೊದಲ ಹಂತದಲ್ಲಿಯೇ ಮತದಾನ ನಡೆಯಲು ಇದು ಕಾರಣ ಎಂದು ಆ ಪಕ್ಷ ಆರೋಪಿಸುತ್ತಿದೆ. ವೈಎಸ್‌ಆರ್‌ಪಿ ನಿಯೋಗವು ಆಯೋಗವನ್ನು ಭೇಟಿಯಾಗಿ ದೂರು ನೀಡಿದ ಬಳಿಕ ಗುಪ್ತಚರ ವಿಭಾಗದ ಮಹಾನಿರ್ದೇಶಕ ಮತ್ತು ಇಬ್ಬರು ಎಸ್‌ಪಿಗಳ ವರ್ಗಾವಣೆಯು ಈ ಸಂಘರ್ಷವನ್ನು ಇನ್ನಷ್ಟು ತೀವ್ರವಾಗಿಸಿದೆ. ಪೊಲೀಸ್‌ ಮಹಾ ನಿರ್ದೇಶಕ ಆರ್‌.ಪಿ. ಠಾಕೂರ್‌ ಅವರು ಹೊಂದಿದ್ದ ಭ್ರಷ್ಟಾಚಾರ ತಡೆ ದಳದ ಹೊಣೆಯನ್ನು ಆಯೋಗವು ಕಿತ್ತುಕೊಂಡಿದೆ.

ಮುಖ್ಯ ಕಾರ್ಯದರ್ಶಿಯ ವರ್ಗಾವಣೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿನ ಟಿಡಿಪಿ ಮುಖಂಡರ ಮನೆಗಳಲ್ಲಿ ಆದಾಯ ತೆರಿಗೆ ಶೋಧ ಕಾರ್ಯಾಚರಣೆಗಳು ಡಿಪಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಕೆರಳಿಸಿವೆ. ‘ಮುಂದಿನ ಕೆಲವು ದಿನಗಳಲ್ಲಿ ಅವರು ನನ್ನನ್ನೇ ಬಂಧಿಸಬಹುದು. ನೀವೇ ನನ್ನನ್ನು ಕಾಯಬೇಕು’ ಎಂದು ರೋಡ್‌ಶೋ ಒಂದರಲ್ಲಿ ನಾಯ್ಡು ಅವರು ಮತದಾರರನ್ನು ಕೇಳಿಕೊಂಡಿದ್ದಾರೆ.

ಜಗನ್‌ಗೆ ಕೆಸಿಆರ್‌ ಬೆಂಬಲ:ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ದತ್ತಾಂಶವನ್ನು ‘ಕದಿಯಲು’ ಟಿಡಿಪಿ ಕಾರ್ಯಕರ್ತರಿಗೆ ಆ್ಯಪ್‌ ಅಭಿವೃದ್ಧಿ ಮಾಡಿಕೊಟ್ಟಿರುವ ಹೈದರಾಬಾದ್‌ನ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿಯೂ ತೆಲಂಗಾಣ ಪೊಲೀಸರು ಶೋಧ ನಡೆಸಿದ್ದಾರೆ. ವೈಎಸ್‌ಆರ್‌ ಪಕ್ಷದ ಪರವಾಗಿ ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷದ ನಾಯಕರು ಪ್ರಚಾರ ನಡೆಸಿಲ್ಲ. ಆದರೆ, ಕೆಸಿಆರ್‌ ಮತ್ತು ಜಗನ್‌ ಶಾಮೀಲಾಗಿದ್ದಾರೆ ಎಂದು ಬಿಂಬಿಸುವಲ್ಲಿ ನಾಯ್ಡು ಯಶಸ್ವಿಯಾಗಿದ್ದಾರೆ. ಹಾಗಾಗಿ, ಕೊನೆಯ ಕ್ಷಣದಲ್ಲಿ ಇದು ನಾಯ್ಡು ಅವರಿಗೆ ಸ್ವಲ್ಪ ಅನುಕೂಲ ಸೃಷ್ಟಿಸಿದೆ.

ನಾಯ್ಡುಗೆ ಪವನ್‌ ನೆರವು:ಟಿಡಿಪಿ ಮತ್ತು ವೈಎಸ್‌ಆರ್‌ಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ನಟ ಪವನ್‌ ಕಲ್ಯಾಣ್‌ ಅವರು ಆರಂಭದಿಂದಲೂ ಹೇಳಿಕೊಂಡು ಬಂದಿದ್ದರು. ಆದರೆ, ಅವರು ಈಗ ಟಿಡಿಪಿಯತ್ತ ಸಂಪೂರ್ಣವಾಗಿ ವಾಲಿದ್ದಾರೆ. ಜಗನ್‌ ಅವರಿಗೆ ಅಪರಾಧ ಹಿನ್ನೆಲೆ ಇದೆ ಎಂದು ಆರೋಪಿಸುತ್ತಿದ್ದಾರೆ. ಜನಸೇನಾ ಪಕ್ಷವು ಚುನಾವಣೆ ಬಳಿಕ ಟಿಡಿಪಿಯಲ್ಲಿ ವಿಲೀನವಾಗಲಿದೆ ಎಂದೂ ಕೆಲವು ವರ್ಗದ ಮತದಾರರು ಭಾವಿಸಿದ್ದಾರೆ. ಜನಸೇನಾವು ಕಾಪು ಸಮುದಾಯದ ಮತಗಳ ವಿಭಜನೆಗೆ ಕಾರಣವಾಗಬಹುದು ಎಂಬ ವಿಶ್ಲೇಷಣೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.