ADVERTISEMENT

ನಾವು ಮೊಮ್ಮಗ ಪ್ರಜ್ವಲ್‌ಗೆ ಮತ ಹಾಕಿದ್ದೇವೆ: ಎಚ್.ಡಿ.ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:39 IST
Last Updated 2 ಮೇ 2019, 15:39 IST
ಎಚ್‌.ಡಿ.ದೇವೇಗೌಡ ಅವರು ಪತ್ನಿ ಚನ್ನಮ್ಮ ಅವರೊಂದಿಗೆ ಹಾಸನದಲ್ಲಿ ಮತ ಚಲಾಯಿಸಿದರು.
ಎಚ್‌.ಡಿ.ದೇವೇಗೌಡ ಅವರು ಪತ್ನಿ ಚನ್ನಮ್ಮ ಅವರೊಂದಿಗೆ ಹಾಸನದಲ್ಲಿ ಮತ ಚಲಾಯಿಸಿದರು.    

ಹಾಸನ: ‘ಪುತ್ರ ರೇವಣ್ಣಗೆ 1994ರಿಂದ ಮತ ಚಲಾಯಿಸಿದ್ದೇನೆ, ಇಂದು ಮೊಮ್ಮಗನಿಗೆ ಮತ ಹಾಕಿದ್ದೇನೆ. ಅನೇಕರು ನಮ್ಮ ವಂಶದ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ನಾವು ರೈತರ ಮಕ್ಕಳು, ದೈವದಲ್ಲಿ ನಂಬಿಕೆ ಇಟ್ಟು ಕೊಂಡಿದ್ದೇವೆ. ಮತದಾರರ ಆಶೀರ್ವಾದದಿಂದ ಹಂತ ಹಂತವಾಗಿ ಬೆಳೆದು ಬಂದಿದ್ದೇವೆ. ನಾವೆಲ್ಲರೂ ಕೈಲಾದ ಮಟ್ಟಿಗೆ ಮತದಾರರ ಸೇವೆ ಮಾಡಿದ್ದೇವೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

‘ಪ್ರಜ್ವಲ್ ಇಂಜಿನಿಯರಿಂಗ್ ಪದವೀಧರ, ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಮಾಡಿದೆವು. ಯಾವುದೇ ಆತಂಕ ಇಲ್ಲದೆ ಪ್ರಜ್ವಲ್ ಜಯಶಾಲಿಯಾಗುತ್ತಾನೆ. ಮಂಡ್ಯದಲ್ಲೂ ನಿಖಿಲ್‌ಗೆ ಯಾವುದೇ ತೊಂದರೆ ಇಲ್ಲ ಅವರೂ ಗೆಲ್ಲುತ್ತಾರೆ’ ಎಂದರು.

ತುಮಕೂರಿನಲ್ಲಿ ನಾನು‌ ನಿಂತಿದ್ದೇನೆ, ಇದೆಲ್ಲಾ ದೈವದ ಆಟ. ಕಾಂಗ್ರೆಸ್ ನಾವು ಒಗ್ಗಟ್ಟಿನಿಂದ ಚುನಾವಣಾ ಎದುರಿಸಿದ್ದೇವೆ. ‌ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಾವು 10 ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ ಇದೆ. ಜತೆಗೆ, 2ನೇ ಹಂತದ ಕ್ಷೇತ್ರಗಳಲ್ಲೂ ರಾಹುಲ್‌ ಗಾಂಧಿ ಹಾಗೂ ಕೈ ನಾಯಕರ ಜೊತೆ ಜಂಟಿ‌ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರ 20% ಸರ್ಕಾರ ಎಂಬ ಪ್ರಧಾನಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ ರೇಫಲ್ ಹಗರಣದಲ್ಲಿ 3 ಸಾವಿರ ಕೋಟಿ ಹಗರಣ ನಡೆದಿದೆ ಎಂಬ ದೂರಿದೆ. ದೊಡ್ಡ ಸ್ಥಾನದಲ್ಲಿರುವವರು ಲಘುವಾಗಿ ಮಾತನಾಡೋದನ್ನು ಬಿಟ್ಟರೆ ಅವರಿಗೂ ಗೌರವ ಬರಲಿದೆ. 5 ವರ್ಷದಲ್ಲಿ 10 ಕೋಟಿ ಉದ್ಯೋಗಿ ಸೃಷ್ಟಿ ಭರವಸೆ ಏನಾಯ್ತು. ಈ ಎಲ್ಲಾ ಕಾರಣಗಳಿಂದ ಮೋದಿ‌ ಸ್ಪಷ್ಟ ಬಹುಮತ ಪಡೆಯಲ್ಲ’ ಎಂದು ಭವಿಷ್ಯ ನುಡಿದರು.

ಬಹುಶಃ ಅತಂತ್ರದ ಲೋಕಸಭೆ ನಿರ್ಮಾಣವಾಗಬಹುದು. ಅಂತಿಮವಾಗಿ ಜಾತ್ಯಾತೀತ ಪಕ್ಷಗಳು ಅಧಿಕಾರ ಹಿಡಿಯಬಹುದು. ಎಲ್ಲದಕ್ಕೂ ಮೇ 23 ರ ನಂತರ ಒಂದು ರೂಪ ಬರಲಿದೆ. ರಾಹುಲ್‌ ಗಾಂಧಿ ಪ್ರಧಾನಿಯಾಗಲು ನನ್ನ ಬೆಂಬಲವಿದೆ, ಬೇರೆಯವರನ್ನೂ ಒಟ್ಟು ಗೂಡಿಸಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.