ADVERTISEMENT

ಗೃಹಸಚಿವ ಎಂ.ಬಿ.ಪಾಟೀಲ ಬೆಂಬಲಿಗರಿಂದ ದಾಂಧಲೆ: ಶಾಸಕ ನಡಹಳ್ಳಿ ಮೇಲೆ ಹಲ್ಲೆ ಯತ್ನ

ಪತ್ರಿಕಾಗೋಷ್ಠಿಗೆ ನುಗ್ಗಿದ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 17:21 IST
Last Updated 13 ಏಪ್ರಿಲ್ 2019, 17:21 IST
ವಿಜಯಪುರದಲ್ಲಿ ಶನಿವಾರ ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಡೆದ ದಾಂಧಲೆಯ ಚಿತ್ರಣ
ವಿಜಯಪುರದಲ್ಲಿ ಶನಿವಾರ ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಡೆದ ದಾಂಧಲೆಯ ಚಿತ್ರಣ   

ವಿಜಯಪುರ:ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿಜಯಪುರದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಗೆ ನುಗ್ಗಿದ ಗೃಹ ಸಚಿವ ಎಂ.ಬಿ.ಪಾಟೀಲ ಬೆಂಬಲಿಗರು, ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದರು. ದಾಂಧಲೆ ನಡೆಸಿ, ಉದ್ವಿಗ್ನ ವಾತಾವರಣ ನಿರ್ಮಿಸಿದರು.

ಧಿಕ್ಕಾರ–ಜೈಕಾರದ ಘೋಷಣೆಗಳನ್ನು ಮೊಳಗಿಸಿಕೊಂಡೇ ಪತ್ರಿಕಾಗೋಷ್ಠಿ ನಡೆದಿದ್ದ ಸಭಾಂಗಣಕ್ಕೆ ನುಗಿದ್ದ ಗುಂಪು, ನೇರವಾಗಿ ಶಾಸಕ ನಡಹಳ್ಳಿಯತ್ತಲೇ ತೆರಳಿತು. ಗೋಷ್ಠಿಯಲ್ಲಿದ್ದ ಪತ್ರಕರ್ತ ಸಮೂಹ ಚೆದುರಿತು.

‘ಭಾರತ ದೇಶ, ಜೈ ಜೈ ಬಸವೇಶ, ಹುಚ್ಚ ಹುಚ್ಚ ನಡಹಳ್ಳಿ ಹುಚ್ಚ ಘೋಷಣೆಗಳು...’ ತಾರಕಕ್ಕೇರಿದವು. ಇದರ ನಡುವೆ ಗೃಹಸಚಿವ ಎಂ.ಬಿ.ಪಾಟೀಲ ಪರ ಜೈಕಾರದ ಘೋಷಣೆ ಮೊಳಗಿದವು. ಈ ಗುಂಪಿನಲ್ಲಿ ಕಾಂಗ್ರೆಸ್‌ ಮುಖಂಡರು, ಮುಸ್ಲಿಂ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿದ್ದುದು ಗೋಚರಿಸಿತು. ಬಹುತೇಕರು ತಮ್ಮ ತಲೆಯ ಮೇಲೆ ಲಿಂಗಾಯತ ಧರ್ಮದ ಪರ ಬರಹವಿದ್ದ ಟೊಪ್ಪಿಗೆ ಧರಿಸಿದ್ದು ಕಂಡುಬಂದಿತು.

ADVERTISEMENT

ಎರಡ್ಮೂರು ನಿಮಿಷದಲ್ಲೇ ಸ್ಥಳಕ್ಕೆ ಧಾವಿಸಿದ ವಿಜಯಪುರ ಡಿವೈಎಸ್‌ಪಿ ಡಿ.ಅಶೋಕ ನೇತೃತ್ವದ ಪೊಲೀಸ್ ಪಡೆ, ದಾಂಧಲೆ ನಡೆಸುತ್ತಿದ್ದ ಗುಂಪನ್ನು ಹೋಟೆಲ್‌ನಿಂದ ಹೊರಹಾಕಿತು. ನಡಹಳ್ಳಿ ಪತ್ರಿಕಾಗೋಷ್ಠಿ ಮುಂದುವರೆಸಿದರು. ಹೊರಗಿನಿಂದಲೂ ಗುಂಪಿನ ಧಿಕ್ಕಾರದ ಘೋಷಣೆ ಮುಂದುವರೆಯಿತು. ಪೊಲೀಸರು ಗುಂಪನ್ನು ಅಲ್ಲಿಂದಲೂ ಚೆದುರಿಸಿದರು.

‘ಗೂಂಡಾ ಸರ್ಕಾರ: ಗೂಂಡಾಗಿರಿ’
‘ಗೃಹ ಸಚಿವರೇ ತಮ್ಮ ಬೆಂಬಲಿಗರ ಮೂಲಕ ಗೂಂಡಾಗಿರಿ ನಡೆಸಿದ್ದಾರೆ. ನನ್ನ ಹಕ್ಕನ್ನು ಕಸಿಯುವ ಯತ್ನ ಮಾಡಿದ್ದಾರೆ. ಇವರನ್ನು ಪ್ರಶ್ನಿಸಿದರೆ ಜೀವ ತೆಗೆಯುವ ಆದೇಶವನ್ನು ತಮ್ಮ ಬೆಂಬಲಿಗ ಸಮೂಹಕ್ಕೆ ನೀಡಿದ್ದಾರಾ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರು ಪ್ರಶ್ನಾತೀತರಾ’ ಎಂದು ನಡಹಳ್ಳಿ ಎಂ.ಬಿ.ಪಾಟೀಲ ವಿರುದ್ಧ ಕಿಡಿಕಾರಿದರು.

‘ದಾಂಧಲೆಕೋರರ ಗುಂಪು ನನ್ನ ಮೇಲೆ ವಾಟರ್‌ ಬಾಟಲ್‌ ಎಸೆದಿದೆ. ಹಲ್ಲೆಗೆ ಯತ್ನಿಸಿದೆ. ಸಕಾಲಕ್ಕೆ ಪೊಲೀಸರು ಆಗಮಿಸಿದ್ದಕ್ಕೆ ನನ್ನ ಜೀವ ಉಳಿದಿದೆ. ಈ ಹಿಂದೆ ಇವರೇ ಉಸ್ತುವಾರಿ ಸಚಿವರಾಗಿದ್ದಾಗ ಕೋರವಾರದಲ್ಲೂ ಹಲ್ಲೆಗೆ ಬೆಂಬಲಿಗರ ಮೂಲಕ ಯತ್ನಿಸಿದ್ದರು. ಗೃಹ ಸಚಿವರ ಕುಮ್ಮಕ್ಕಿನಿಂದಲೇ ಇಂದಿನ ವಿದ್ಯಮಾನ ನಡೆದಿದೆ’ ಎಂದು ದೂರಿದರು.

‘ಈ ಘಟನೆಯನ್ನು ಇಲ್ಲಿಗೆ ಬಿಡುವುದಿಲ್ಲ. ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡುವೆ. ಸ್ಪೀಕರ್‌ಗೂ ದೂರು ನೀಡುವೆ. ನಂತರ ಯಡಿಯೂರಪ್ಪ ಹಾಗೂ ಪಕ್ಷದ ಕಾನೂನು ತಜ್ಞರ ಸಲಹೆ ಪಡೆದು, ಮುಂದಿನ ಕ್ರಮ ತೆಗೆದುಕೊಳ್ಳುವೆ. ಇದು ಪುನರಾವರ್ತನೆಯಾದರೆ, ನಮಗೂ ಪಕ್ಷವಿದೆ. ಕಾರ್ಯಕರ್ತರಿದ್ದಾರೆ. ಬೆಂಬಲಿಗರಿದ್ದಾರೆ. ಬೀದಿಗಿಳಿಯಲು ನಾವೂ ಸಿದ್ಧ’ ಎಂದು ನಡಹಳ್ಳಿ ಗುಡುಗಿದರು.

‘ನಾನು ಲಿಂಗಾಯತ; ಬಸವ ಕುಲದವನು’
‘ನಾನು ಲಿಂಗಾಯತ. ಬಸವ ಕುಲದವನು. ವೀರಶೈವ ಲಿಂಗಾಯತ ಮಠದ ಪರಂಪರೆಯ ಅನ್ನವುಂಡವನು. ನಮ್ಮ ಕುಟುಂಬ ಯಾವ ಕಾರಣಕ್ಕೂ ಒಡೆಯಲು ಅವಕಾಶ ನೀಡಲ್ಲ’ ಎಂದು ನಡಹಳ್ಳಿ ದಾಂಧಲೆ ಬಳಿಕ ಹೇಳಿದರು.

‘ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗಿಳಿಸಿದ ವಂಶಸ್ಥರಿವರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲೇಬಾರದು ಎಂದು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಟ ನಡೆಸಿದವರು ಇವರು. ನನ್ನನ್ನು ಕೊಂದರೂ ಸರಿ. ಪ್ರಾಣ ಹೋದರೂ ಇವರ ವಿರುದ್ಧ ನಿಲ್ಲುವೆ’ ಎಂದು ಎ.ಎಸ್.ಪಾಟೀಲ ಗುಡುಗಿದರು.

ಕ್ರಮ ತೆಗೆದುಕೊಳ್ಳುತ್ತೇವೆ: ಎಸ್‌.ಪಿ
‘ಪತ್ರಿಕಾಗೋಷ್ಠಿ ನಡೆದಿದ್ದಾಗ ಗುಂಪೊಂದು ದಾಂಧಲೆ ನಡೆಸಿದೆ. ನನಗೆ ಧಮ್ಕಿ ಹಾಕಿದೆ. ಜೀವ ಬೆದರಿಕೆಯನ್ನು ಹಾಕಿದೆ. ಇದರಲ್ಲಿ ಗೃಹ ಸಚಿವರ ಕೈವಾಡವಿರುವ ಶಂಕೆಯಿದೆ. ಸೂಕ್ತ ಕ್ರಮ ಜರುಗಿಸಿ. ಜತೆಗೆ ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಒದಗಿಸಿ’ ಎಂದು ಶಾಸಕ ನಡಹಳ್ಳಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

*
ಶರಣ ಸಂಸ್ಕಾರದವನು ನಾನು. ಹೊಡಿ, ಬಡಿ ಗೊತ್ತಿಲ್ಲ. ಇಂಥದ್ದಕ್ಕೆ ಹೆದರಲ್ಲ. ನೀರಾವರಿ ಹೋರಾಟ ಮುಂದುವರೆಯಲಿದೆ. ಮತ್ತಷ್ಟು ಗಟ್ಟಿಯಾಗಿರುವೆ.
-ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ

*
ನಡಹಳ್ಳಿ ಹದ್ದು ಮೀರಿ ಮಾತನಾಡಿದ್ದಕ್ಕೆ ಜನ ಆಕ್ರೋಶಗೊಂಡಿದ್ದಾರೆ. ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಪತ್ರಿಕಾಗೋಷ್ಠಿಗೆ ನುಗ್ಗಿದ್ದು ತಪ್ಪು. ನಡಹಳ್ಳಿ ಇನ್ನಾದರೂ ನಾಲಗೆ ನಿಯಂತ್ರಣದಲ್ಲಿಟ್ಟುಕೊಳ್ಳಲಿ.
-ಎಂ.ಬಿ.ಪಾಟೀಲ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.