ADVERTISEMENT

‘ಮೋದಿ ಯುವಜನ ವಿರೋಧಿ’ ಜಾಥಾ ಏ. 5ರಿಂದ

ಯುವ ಕಾಂಗ್ರೆಸ್, ಯುವ ಜನತಾದಳದ ಜಂಟಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:52 IST
Last Updated 3 ಏಪ್ರಿಲ್ 2019, 13:52 IST

ಮಡಿಕೇರಿ: ಭಾರತೀಯ ಯುವ ಕಾಂಗ್ರೆಸ್ ಮತ್ತು ಯುವ ಜನತಾದಳ ವತಿಯಿಂದ ಏ. 5ರಿಂದ 8ರವರೆಗೆ ಜಿಲ್ಲೆಯಾದ್ಯಂತ ‘ಮೋದಿ ಯುವಜನ ವಿರೋಧಿ’ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನೀಫ್ ಸಂಪಾಜೆ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ಲೋಕಸಭೆ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಆ ನಿಟ್ಟಿನಲ್ಲಿ ಯುವಕರೇ ಹೆಚ್ಚಿರುವ ದೇಶದಲ್ಲಿ ಯುವ ಮತದಾರರು ಜಾಗೃತರಾಗಬೇಕು’ ಎಂದು ಹೇಳಿದರು.

ದೇಶದಲ್ಲಿ ಒಟ್ಟು ಜನಸಂಖ್ಯೆಯಶೇ 48ರಷ್ಟಿರುವ ಯುವಜನರು 2014ರಲ್ಲಿ ಪ್ರಧಾನ ಮಂತ್ರಿ ಮೋದಿಗೆ ಮತ ನೀಡುವ ಮೂಲಕ ಬಹುಮತದಿಂದ ಅಧಿಕಾರಕ್ಕೆ ತಂದಿದ್ದರು. ಆದರೆ, ಮೋದಿ ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಗಳು ಸುಳ್ಳಾಗಿವೆ. ಅದನ್ನು ಅರಿತು ಈ ಬಾರಿ ಜಿಲ್ಲೆಯ ಯುವ ಜನರು ಮೈತ್ರಿ ಪಕ್ಷವನ್ನು ಬೆಂಬಲಿಸಬೇಕು ಎಂದು ಹನೀಫ್ ಮನವಿ ಮಾಡಿದರು.

ADVERTISEMENT

ಮೋದಿ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿಗೆ ಸ್ವಉದ್ಯೋಗಕ್ಕೆ ಬೆಂಬಲ ಮತ್ತಿತರ ಕನಸುಗಳನ್ನು ಬಿತ್ತಿದ್ದರೂ ಆಡಳಿತಾವಧಿಯಲ್ಲಿ ಯಾವುದೇ ಭರವಸೆಗಳು ಈಡೇರಿಲ್ಲ. ಆದ್ದರಿಂದ, ಮೋದಿ ಯುವ ಜನರ ವಿರೋಧಿ ಎಂದು ದೂರಿದರು.

ಉದ್ಯೋಗ ಸೃಷ್ಟಿ ಬದಲಾಗಿ, ಉದ್ಯೋಗ ನಾಶವಾಗುತ್ತಿವೆ. ರೈಲ್ವೆ ಇಲಾಖೆಯಲ್ಲಿ 9 ಸಾವಿರ ಉದ್ಯೋಗ ನೇಮಕಾತಿಗೆ ಲಕ್ಷಾಂತರ ಅರ್ಜಿಗಳು ಬಂದಿವೆ. ಇವರಲ್ಲಿ ಸ್ನಾತಕೋತ್ತರ ಪದವೀಧರರು, ಪಿಎಚ್‌.ಡಿ ಪದವೀಧರರು ಇದ್ದು, ಈ ಸಂಖ್ಯೆ ಉದ್ಯೋಗ ತೀವ್ರತೆಯನ್ನು ತಿಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ನೋಟು ರದ್ದತಿಯ ಆದೇಶದಿಂದ ಲಕ್ಷಾಂತರಗುಡಿ ಕೈಗಾರಿಕೆ, ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆಹೆಚ್ಚಿನ ನಷ್ಟವಾಗಿದೆ ಎಂದು ದೂರಿದರು.

ಕೃಷಿ ವಲಯದಲ್ಲಿ ತೊಡಗಿರುವ ಯುವಕರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ; ಇನ್ನು ಸರ್ಕಾರಿ ಉದ್ಯೋಗ ನೇಮಕಾತಿ ಕೂಡ ಕಡಿಮೆ ಆಗುತ್ತಿರುವುದರಿಂದ, ಉದ್ಯೋಗಪಡೆಯುವವರ ಸಂಖ್ಯೆಗಿಂತ ನಿವೃತ್ತಿ ಹೊಂದುವವರ ಸಂಖ್ಯೆ ಹೆಚ್ಚುತ್ತಿದೆಎಂದು ಆತಂಕ ವ್ಯಕ್ತಪಡಿಸಿದರು.

ಯುವ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಲ್.ವಿಶ್ವ ಮಾತನಾಡಿ, ಜಾಥಾವು ಜಂಟಿ ವಾಹನ ಪ್ರಚಾರವಾಗಿದ್ದು, 5ರಂದು ಬೆಳಿಗ್ಗೆ 10.30ಕ್ಕೆ ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಚಾಲನೆಗೊಳ್ಳಲಿದೆ. 8ರಂದು ಸಂಜೆ 4ಕ್ಕೆ ವಿರಾಜಪೇಟೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಸಮಾವೇಶಗೊಳ್ಳಲಿದೆಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಲೋಕಸಭೆ ಚುನಾವಣೆ ಈ ಬಾರಿಗೆ ಮೈತ್ರಿ ಪರವಾಗಿದ್ದು, ಗೆಲುವಿಗೆ ಎಲ್ಲ ಯುವಕರು, ವಿದ್ಯಾರ್ಥಿಗಳು ಬೆಂಬಲ ನೀಡಬೇಕು ಎಂದು ಕೋರಿದರು.

ಇಲ್ಲಿಯ ಜನ ಬುದ್ಧಿವಂತರಿದ್ದಾರೆ. ಈ ಬಾರಿ ಮೈತ್ರಿ ಗೆಲುವು ನಿಶ್ಚಿತ, ಪಕ್ಷದಲ್ಲಿ ಯುವ ಕಾರ್ಯಕರ್ತರು ಹೆಚ್ಚುತ್ತಿರುವುದರಿಂದ ಪಕ್ಷ ಸಂಘಟನೆ ಬಲಗೊಂಡಿದೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರದ ಕೊಡುಗೆಯಿಂದ ಎರಡು ಹೊಸ ತಾಲ್ಲೂಕುಗಳು ಜಿಲ್ಲೆಗೆ ಸಿಕ್ಕಿವೆ. ಕೊಡಗಿನಲ್ಲಿ ಆದ ಪ್ರಕೃತಿ ವಿಕೋಪಕ್ಕೆ ತುರ್ತು ಕ್ರಮ ಕೈಗೊಂಡು ಪುನರ್ವಸತಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೈಜೋಡಿಸಿದೆ ಎಂದು ವಿಶ್ವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿ ಜಾಸಿರ್‌, ನಗರ ಅಧ್ಯಕ್ಷ ರವಿಕಿರಣ್‌, ಯುವ ಕಾಂಗ್ರೆಸ್‌ ಪದಾಧಿಕಾರಿಗಳಾದ ಜೆ. ಸೋಮಣ್ಣ, ಕೆ.ಎನ್. ರಾಘವೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.