ADVERTISEMENT

ಬೆಂಗಳೂರು ಉತ್ತರ ಲೋಕಸಭಾ: ‘ಕಮಲ’ ಕೀಳಲು ‘ಕೈ’ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 0:01 IST
Last Updated 5 ಏಪ್ರಿಲ್ 2024, 0:01 IST
   

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದು, ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ, ಈ ಬಾರಿ ಬಿಜೆಪಿಯಿಂದ ಯಾರು? ಎಂಬ ಚರ್ಚೆ ಆರಂಭವಾಗಿತ್ತು. ಕೆಲ ದಿನಗಳ ಬಳಿಕ ಮತ್ತೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಗೌಡರು ಯತ್ನಿಸಿದ್ದರು. ಆದರೆ, ಪಕ್ಷದ ವರಿಷ್ಠರು ಅವರಿಗೆ ‘ನಿವೃತ್ತಿ’ ನೀಡಿ, ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಿದ್ದಾರೆ. ಕರಂದ್ಲಾಜೆಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಕೆಲವು ಹೆಸರುಗಳು ಚರ್ಚೆಗೆ ಬಂದರೂ ಅದೃಷ್ಟ ಒಲಿದದ್ದು ‘ಪ್ರೊಫೆಸರ್’ ಎಂ.ವಿ. ರಾಜೀವ್‌ ಗೌಡರಿಗೆ.

1952ರ ಮೊದಲ ಚುನಾವಣೆಯಿಂದ ಕೆಂಗಲ್ ಹನುಮಂತಯ್ಯ, ಸಿ. ಕೆ. ಜಾಫರ್ ಷರೀಫ್ ಅವರಂಥ ಘಟನಾಘಟಿ ನಾಯಕರನ್ನು ಚುನಾಯಿಸುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದ ಈ ಕ್ಷೇತ್ರದ ಮತದಾರರು, 2008ರಿಂದ ಸತತ ನಾಲ್ಕು ಬಾರಿ  ಚುನಾವಣೆಗಳಿಂದ ಕಮಲ ಪಕ್ಷದ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದ್ದಾರೆ. ಬಿಜೆಪಿ ಈ ಬಾರಿಯೂ ಜಯಭೇರಿ ಬಾರಿಸುವ ಉತ್ಸಾಹದಲ್ಲಿದೆ. ಜೊತೆಗೆ, ಜೆಡಿಎಸ್‌ ಜೊತೆಗಿನ ‘ಮೈತ್ರಿ’ಯೂ ಅನುಕೂಲ ಆಗಬಹುದು ಎನ್ನುವುದು ಬಿಜೆಪಿಗರ ನಿರೀಕ್ಷೆ.

ಮೋದಿ ವರ್ಚಸ್ಸನ್ನೇ ನಂಬಿರುವ ಬಿಜೆಪಿಯಿಂದ ಈ ಬಾರಿ ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರದ ಸೂತ್ರ ಹಿಡಿದಿರುವುದು, ಪಂಚ ‘ಗ್ಯಾರಂಟಿ’ಗಳು ನೆರವಾಗಬಹುದು ಎನ್ನುವುದು ‘ಕೈ’ ನಾಯಕರ ವಿಶ್ವಾಸ. ಕಳೆದ ಬಾರಿ ವರಿಷ್ಠರ ಒತ್ತಾಸೆ, ಮನವೊಲಿಕೆ ಮೇರೆಗೆ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿದ್ದ ಕೃಷ್ಣಬೈರೇಗೌಡ ಸೋತಿದ್ದರು. ಈ ಬಾರಿ ಅವರು ರಾಜೀವ್‌ ಗೌಡರ ಬೆನ್ನಿಗೆ ನಿಂತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.