ADVERTISEMENT

‘ಜೆಡಿಎಸ್‌ ಪಕ್ಷದ ಪ್ರಣಾಳಿಕೆ ಬೋಗಸ್’

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:30 IST
Last Updated 22 ಮೇ 2018, 19:30 IST
‘ಜೆಡಿಎಸ್‌ ಪಕ್ಷದ ಪ್ರಣಾಳಿಕೆ ಬೋಗಸ್’
‘ಜೆಡಿಎಸ್‌ ಪಕ್ಷದ ಪ್ರಣಾಳಿಕೆ ಬೋಗಸ್’   

ಶಿವಮೊಗ್ಗ: ‘ಪೂರ್ಣ ಬಹುಮತ ಬಾರದೇ ಸಾಲ ಮನ್ನಾ ಅಸಾಧ್ಯ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ಜೆಡಿಎಸ್ ಪ್ರಣಾಳಿಕೆ ಬೋಗಸ್‌’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.

ಅಧಿಕಾರ ಸ್ವೀಕರಿಸುವ ಮೊದಲೇ ಇಂತಹ ಹೇಳಿಕೆ ನೀಡುವ ಮೂಲಕ ಜೆಡಿಎಸ್ ರಾಜ್ಯದ ರೈತ ಸಮುದಾಯಕ್ಕೆ ದ್ರೋಹ ಬಗೆದಿದೆ. ಕೇವಲ ರೈತರ ಸಾಲ ಮನ್ನಾ ಅಲ್ಲ; ಮಹಿಳೆಯರು, ಕಾರ್ಮಿಕರಿಗೆ ನೆರವು ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಆಶ್ವಾಸನೆಗಳೂ ಬೋಗಸ್ ಇರಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಕುಮಾರಸ್ವಾಮಿ ತಾವು ನೀಡಿದ ಹೇಳಿಕೆ ವಾಪಸ್ ಪಡೆಯಬೇಕು. ರೈತರ ಕ್ಷಮೆಯಾಚಿಸಬೇಕು. ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸರ್ಕಾರ ಆರ್ಥಿಕವಾಗಿ ಸದೃಢವಾಗಿಲ್ಲ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಕುಮಾರಸ್ವಾಮಿ ಸಾಥ್‌ ನೀಡಿದ್ದಾರೆ. ಡಿಕೆಶಿ ದ್ರೋಹದ ನೆಲೆಗಟ್ಟಿಗೆ ಎಚ್‌ಡಿಕೆ ಕಟ್ಟಡ ಕಟ್ಟುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಮ್ಮಿಶ್ರ ಸರ್ಕಾರದ ಆಯಸ್ಸು ಕೆಲವೇ ತಿಂಗಳಷ್ಟೆ. ಈ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ಮಂಡಿಸುವ ಮೊದಲೇ ಪತನವಾಗುತ್ತದೆ. ಯಾವುದೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಬಹುದು, ಇಲ್ಲವೇ ರಾಷ್ಟ್ರಪತಿ ಆಡಳಿತ ಜಾರಿಯಾಗಬಹುದು ಎಂದು ಕೆ.ಎಸ್. ಈಶ್ವರಪ್ಪ ಅವರು ಭವಿಷ್ಯ ನುಡಿದರು.

ಯೂ ಟರ್ನ್: ಶೆಟ್ಟರ್‌ ಟೀಕೆ

ಹುಬ್ಬಳ್ಳಿ: ರೈತರ ಸಾಲ ಮನ್ನಾ ವಿಷಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಯೂ ಟರ್ನ್‌ ತೆಗೆದುಕೊಂಡಿದ್ದಾರೆ ಎಂದು ಶಾಸಕ ಜಗದೀಶ ಶೆಟ್ಟರ್‌ ಮಂಗಳವಾರ ಇಲ್ಲಿ ಟೀಕಿಸಿದರು.

ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಕಷ್ಟ ಎಂದು ಹೇಳುವ ಮೂಲಕ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಹೇಳಿದಂತೆ ನಡೆದುಕೊಳ್ಳದೇ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌, ಸರ್ಕಾರ ರಚನೆ ವಿಷಯದಲ್ಲಿ ಜೆಡಿಎಸ್‌ ಮುಂದೆ ಮಂಡಿಯೂರಿ ಕುಳಿತುಕೊಂಡಿರುವುದನ್ನು ನೋಡಿದರೆ, ಇದು ಆ ಪಕ್ಷಕ್ಕೆ ಒದಗಿದ ಅಧೋಗತಿಯನ್ನು ತೋರಿಸುತ್ತದೆ. ಅದು, ಹೊಂದಾಣಿಕೆ ಬದಲು ಜೆಡಿಎಸ್‌ನಲ್ಲಿ ವಿಲೀನಗೊಳ್ಳುವುದೇ ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.